ಮುಖ್ಯ ನ್ಯಾಯಮೂರ್ತಿಯಾಗಿ ಚೆಲ್ಲೂರ್ ಪ್ರತಿಜ್ಞೆ
ಬಾಂಬೆ ಹೈಕೋರ್ಟ್
ಮುಂಬೈ, ಆ.22: ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಕನ್ನಡತಿ ಮಂಜುಳಾ ಚೆಲ್ಲೂರ್ ಇಂದು ಪ್ರತಿಜ್ಞೆ ಸ್ವೀಕರಿಸಿದ್ದಾರೆ. ಅವರು ಈ ಹುದ್ದೆಗೇರಿದ ಎರಡನೆ ಮಹಿಳೆಯಾಗಿದ್ದಾರೆ.
ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ಎಚ್.ವೇಲಾ ಆ.10ರಂದು ನಿವೃತ್ತರಾದ ಕಾರಣ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ಮಂಜುಳಾರನ್ನು ಅಲ್ಲಿಗೆ ವರ್ಗಾವಣೆ ಮಾಡಲಾಗಿತ್ತು.
ಮಹಾರಾಷ್ಟ್ರದ ರಾಜ್ಯಪಾಲ ವಿದ್ಯಾಸಾಗರ ರಾವ್, ಮುಂಬೈಯ ರಾಜಭವನದಲ್ಲಿ ನಡೆದ ಸಮಾರಂಭವೊಂದರಲ್ಲಿ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರ್‌ರಿಗೆ ಅಧಿಕಾರದ ಪ್ರಮಾಣ ವಚನ ಬೋಧಿಸಿದರು.
ರಾಜ್ಯಪಾಲರ ಪತ್ನಿ ವಿನೋದಾ, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಸಚಿವರಾದ ವಿನೋದ್ ತಾವ್ಡೆ, ಚಂದ್ರಕಾಂತ ಪಾಟೀಲ್, ರಾಮ ಶಿಂದೆ, ಜೈಕುಮಾರ್ ರಾವಲ್, ಮಹಾವೀರ ಜನ್ಕರ್, ಸಹಾಯಕ ಸಚಿವ ದೀಪಕ್ ಕೇಸರ್ಕರ್, ಪ್ರಭಾರ ಮುಖ್ಯ ನ್ಯಾಯಮೂರ್ತಿ ವಿಜಯಾ ಕಾಪ್ಸೆ ತಹಿಲ್ರಮಣಿ, ನ್ಯಾಯಮೂರ್ತಿಗಳು, ಹಿರಿಯಾಧಿಕಾರಿಗಳು ಹಾಗೂ ಆಮಂತ್ರಿತರು ಉಪಸ್ಥಿತರಿದ್ದರೆಂದು ರಾಜಭವನದ ವಕ್ತಾರರು ತಿಳಿಸಿದ್ದಾರೆ.





