ಮೊದಲು ಭಾಗವತ್ 10 ಮಕ್ಕಳನ್ನು ಹುಟ್ಟಿಸಲಿ: ಕೇಜ್ರಿವಾಲ್ ತಿರುಗೇಟು
ಹೊಸದಿಲ್ಲಿ,ಆ.22: ಹಿಂದೂ ದಂಪತಿಗಳು ಹೆಚ್ಚೆಚ್ಚು ಮಕ್ಕಳನ್ನು ಹೊಂದಬೇಕು ಎಂಬ ಹೇಳಿಕೆಗಾಗಿ ಆರೆಸ್ಸೆಸ್ ವರಿಷ್ಠ ಮೋಹನ ಭಾಗವತ್ ಅವರ ವಿರುದ್ಧ ಸೋಮವಾರ ಟ್ವಿಟರ್ ದಾಳಿ ನಡೆಸಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು, ಹಿಂದೂಗಳನ್ನು ಪ್ರಚೋದಿಸುವ ಮುನ್ನ ಭಾಗವತ್ ಅವರು ಸ್ವಯಂ ಹತ್ತು ಮಕ್ಕಳನ್ನು ಹುಟ್ಟಿಸಲಿ ಮತ್ತು ಅವರನ್ನು ಚೆನ್ನಾಗಿ ಬೆಳೆಸಲಿ ಎಂದು ಕುಟುಕಿದ್ದಾರೆ.
ಭಾಗವತ್ ಮುಖ್ಯಸ್ಥರಾಗಿರುವ ಆರೆಸ್ಸೆಸ್ ತನ್ನ ಸದಸ್ಯರನ್ನು ಬ್ರಹ್ಮಚಾರಿಗಳಾಗಲು ಉತ್ತೇಜಿಸುತ್ತದೆ.
ಕಳೆದ ವಾರ ಆಗ್ರಾದಲ್ಲಿ ಕಾರ್ಯಕ್ರಮದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ಭಾಗವತ್, ಹಿಂದುಗಳ ಜನಸಂಖ್ಯೆ ಹೆಚ್ಚಬಾರದು ಎಂದು ಯಾವ ಕಾನೂನು ಹೇಳುತ್ತದೆ? ಅಂತಹ ಯಾವುದೇ ಕಾನೂನು ಇಲ್ಲ. ಇತರರ ಜನಸಂಖ್ಯೆ ಹೆಚ್ಚುತ್ತಿರುವಾಗ ಹಿಂದುಗಳನ್ನು ತಡೆಯುತ್ತಿರುವುದು ಯಾರು? ಈ ವಿಷಯ ವ್ಯವಸ್ಥೆಗೆ ಸಂಬಂಧಿಸಿದ್ದಲ್ಲ,ಸಾಮಾಜಿಕ ವಾತಾವರಣ ಇದಕ್ಕೆ ಕಾರಣ ಎಂದು ಹೇಳಿದ್ದರು.
ಭಾಗವತ್ ಹೇಳಿಕೆ ಶಿವಸೇನೆಗೆ ಅಪಥ್ಯ
ಕುಸಿಯುತ್ತಿರುವ ಹಿಂದೂಗಳ ಜನಸಂಖ್ಯೆ ಕುರಿತು ಭಾಗವತ್ ಹೇಳಿಕೆಯನ್ನು ಱಹಳೆಯ ಕಾಲದ್ದು ೞಎಂದು ಸೋಮವಾರ ಬಣ್ಣಿಸಿರುವ ಶಿವಸೇನೆಯು, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮತೋಲನವನ್ನು ಕಾಯ್ದುಕೊಳ್ಳಲು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವಂತೆ ಕೇಂದ್ರವನ್ನು ಆಗ್ರಹಿಸಿದೆ.
ಭಾಗವತ್ ಅವರು ಹಳೆಯ ಕಾಲದ ವಿಚಾರಗಳನ್ನು ಆಧುನಿಕ ರೀತಿಯಲ್ಲಿ ಹೇಳಲು ಪ್ರಯತ್ನಿಸಿದ್ದಾರೆ. ಪ್ರಗತಿಪರ ಹಿಂದೂ ಸಮುದಾಯವು ಅವರ ಹೇಳಿಕೆಗಳನ್ನು ಒಪ್ಪಿಕೊಳ್ಳುವುದಿಲ್ಲ. ಅಲ್ಲದೆ ಹೆಚ್ಚುತ್ತಿರುವ ಮುಸ್ಲಿಮ್ ಜನಸಂಖ್ಯೆಯನ್ನು ಎದುರಿಸಲು ಹಿಂದೂ ಜನಸಂಖ್ಯೆಯನ್ನು ಹೆಚ್ಚಿಸುವುದು ಸೂಕ್ತವಾದ ಮಾರ್ಗ ಎಂದು ಮೋದಿಯವರು ಒಪ್ಪುವುದಿಲ್ಲ ಎಂದು ಸೇನೆಯ ಮುಖವಾಣಿ ಸಾಮ್ನಾದ ಸಂಪಾದಕೀಯವು ಹೇಳಿದೆ.
ಕಾಂಗ್ರೆಸ್ ಟೀಕಾಪ್ರಹಾರ
ಭಾಗವತ್ ಹೇಳಿಕೆಯನ್ನು ಕಟುವಾಗಿ ಟೀಕಿಸಿರುವ ಕಾಂಗ್ರೆಸ್ ಪಕ್ಷವು, ಅವರಿಂದ ಬೇರೆ ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದೆ. ಅವರು ಧರ್ಮವನ್ನೇ ಅವಲಂಬಿಸಿದ್ದಾರೆ, ಅವರು ಬೇರೆ ಯಾವ ಮಾತು ಆಡಲು ಸಾಧ್ಯ ಎಂದು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್ ಅವರು ರವಿವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ಪ್ರತಿಕ್ರಿಯಿಸಿದ್ದರು.
ಪ್ರತಿ ಹೇಳಿಕೆಯಲ್ಲಿಯೂ ಭಾಗವತ್ ಸಮಾಜವನ್ನು ವಿಭಜಿಸುವ ಮಾತುಗಳನ್ನೇ ಆಡುತ್ತಿರುತ್ತಾರೆ.ಅವರು ನಿರುದ್ಯೋಗ, ಬೆಲೆಏರಿಕೆ ಕುರಿತು ಮಾತನಾಡಬೇಕಿತ್ತು. ಆದರೆ ಅವರು ಅದನ್ನು ಮಾಡುತ್ತಿಲ್ಲ ಎಂದರು.







