ರಾಷ್ಟ್ರೀಯತೆಯ ಹೆಸರಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ
.jpg)
ರವಿವಾರ ಮಂಗಳೂರಿಗೆ ಬಿಜೆಪಿಯ ರಾಷ್ಟ್ರೀಯ ನಾಯಕ ಅಮಿತ್ ಶಾ ಕಾಲಿಟ್ಟಾಗ, ಅವರಿಂದ ಕರಾವಳಿ ಬಹಳಷ್ಟನ್ನು ನಿರೀಕ್ಷಿಸಿತ್ತು. ಮುಖ್ಯವಾಗಿ ಜಿಲ್ಲೆಯ ಬಿಜೆಪಿ ಕಾರ್ಯಕರ್ತರೇ ಅವರಿಂದ ಕೆಲವು ಸಮಾಧಾನಗಳನ್ನು ಬಯಸಿದ್ದರು. ಕರಾವಳಿಯಲ್ಲಿ ನಕಲಿ ಗೋರಕ್ಷಕರು ಓರ್ವ ಬಿಜೆಪಿ ಮುಖಂಡನನ್ನೇ ಬರ್ಬರವಾಗಿ ಥಳಿಸಿ ಕೊಂದಿರುವುದರಿಂದ, ವೇದಿಕೆಯಲ್ಲಿ ನಿಂತು ಈ ಗೋರಕ್ಷಕರ ವಿರುದ್ಧ ಅಮಿತ್ ಶಾ ಅವರು ಒಂದಿಷ್ಟು ಕಟು ನುಡಿಗಳನ್ನು ಆಡಿ ಪಕ್ಷದ ಕಾರ್ಯಕರ್ತರಿಗೆ ನೈತಿಕ ಸ್ಥೈರ್ಯ ತುಂಬಲಿದ್ದಾರೆ ಎಂದು ಅವರು ನಿರೀಕ್ಷಿಸಿದ್ದರು. ಇತ್ತೀಚೆಗೆ ನರೇಂದ್ರ ಮೋದಿಯವರು ಈ ಗೋರಕ್ಷಕರನ್ನು ಕ್ರಿಮಿನಲ್‌ಗಳು ಎಂದು ಜರಿದಿದ್ದರು. ‘‘ದಲಿತರ ಮೇಲೆ ಹಲ್ಲೆ ಮಾಡಬೇಡಿ ನನ್ನ ಮೇಲೆ ಹಲ್ಲೆ ನಡೆಸಿ’’ ಎಂದು ಕರೆ ಕೊಟ್ಟಿದ್ದರು. ಆ ಕರೆಯನ್ನು ಈ ನಕಲಿ ಗೋರಕ್ಷಕರು ಉಡುಪಿಯಲ್ಲಿ ಶಿರಸಾವಹಿಸಿ ಪಾಲಿಸಿದ್ದರು. ಜಾನುವಾರು ವ್ಯಾಪಾರ ಮಾಡುತ್ತಿದ್ದ ಬಿಜೆಪಿಯ ಮುಖಂಡನ ಮೇಲೆಯೇ ಹಲ್ಲೆ ನಡೆಸಿ, ಆತನನ್ನು ಕೊಂದು ಹಾಕುವ ಮೂಲಕ ನರೇಂದ್ರ ಮೋದಿಗೆ ಉತ್ತರ ನೀಡಿದ್ದರು.
ತನ್ನ ಪಕ್ಷದ ಮುಖಂಡನ ಮೇಲೆ ನಡೆದ ಈ ಭೀಕರ ಹಲ್ಲೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ಅಮಿತ್ ಶಾ ಕರ್ನಾಟಕವನ್ನುದ್ದೇಶಿಸಿ ಮಾತನಾಡುತ್ತಾರೆ ಎಂದು ಸ್ವತಃ ಬಿಜೆಪಿ ಕಾರ್ಯಕರ್ತರು ನಿರೀಕ್ಷಿಸಿದ್ದರು. ಆದರೆ, ಅಮಿತ್ ಶಾ ತಿರಂಗಾ ಯಾತ್ರೆಗೆ ಚಾಲನೆ ನೀಡಿ, ಈ ದೇಶದ ಸಮಸ್ಯೆಯೇ ‘ಅಭಿವ್ಯಕ್ತಿ ಸ್ವಾತಂತ್ರ’ ಎಂಬಂತೆ ಮಾತನಾಡಿ, ತಿರಂಗಾ ಯಾತ್ರೆಯ ಉದ್ದೇಶವನ್ನೇ ಪ್ರಶ್ನಾರ್ಹಗೊಳಿಸಿದರು. ಈ ದೇಶದ ತಿರಂಗಾ, ಈ ನಾಡಿನ ಜನರಿಗೆ ಅಭಿವ್ಯಕ್ತಿ ಸ್ವಾತಂತ್ರವನ್ನು ನೀಡಿತು. ಅದಕ್ಕಾಗಿಯೇ ನಾವಿಂದು ಆ ತಿರಂಗಾವನ್ನು ಗೌರವಿಸುತ್ತೇವೆ. ಆದರೆ, ಅಮಿತ್ ಶಾ ಅವರಿಗೆ ಆ ಅಭಿವ್ಯಕ್ತಿ ಸ್ವಾತಂತ್ರವೇ ದೇಶದ ಸಮಸ್ಯೆಯಾಗಿ ಕಂಡಿದೆ. ಅಭಿವ್ಯಕ್ತಿ ಸ್ವಾತಂತ್ರದ ಹೆಸರಿನಲ್ಲಿ ರಾಷ್ಟ್ರೀಯತೆಗೆ ಕೆಲವರು ಧಕ್ಕೆ ತರುತ್ತಿದ್ದಾರೆ ಎಂದು ಅಮಿತ್ ಶಾ ಮಂಗಳೂರಿನಲ್ಲಿ ಮಾತನಾಡಿದರು. ಬಹುಶಃ ಅವರು ಈ ಹೇಳಿಕೆಯನ್ನು ದೇಶವನ್ನು ಉದ್ವಿಗ್ನ ಹೇಳಿಕೆಗಳ ಮೂಲಕ ವಿಭಜಿಸುತ್ತಿರುವ ತೊಗಾಡಿಯಾ, ಪ್ರಮೋದ್ ಮುತಾಲಿಕ್ ಅವರನ್ನು ಉದ್ದೇಶಿಸಿ ಹೇಳಿದ್ದಿದ್ದರೆ ಅದು ಅರ್ಥಪೂರ್ಣವಾಗಿರುತ್ತಿತ್ತೋ ಏನೋ. ಆದರೆ ಈ ಹೇಳಿಕೆಯನ್ನು ಅವರು ನೀಡಿರುವುದು ‘ಆಮ್ನೆಸ್ಟಿ’ಯಂತಹ ಮಾನವಹಕ್ಕು ಸಂಘಟನೆಗಳನ್ನು ಹಿನ್ನೆಲೆಯಾಗಿಟ್ಟುಕೊಂಡು. ಕಾಶ್ಮೀರ, ಮಣಿಪುರದಂತಹ ನೆಲದಲ್ಲ್ಲಿ ಸೇನೆ ನಡೆಸುತ್ತಿರುವ ಅನ್ಯಾಯದ ವಿರುದ್ಧ ಮಾತನಾಡುವವರನ್ನು ತಮ್ಮ ಭಾಷಣದಲ್ಲಿ ಗುರಿಯಾಗಿಸಿಕೊಂಡಿದ್ದರು.
ಇಂದು ಈ ದೇಶದ ಸಂವಿಧಾನ, ಪ್ರಜಾಸತ್ತೆ ಅಲ್ಪಸ್ವಲ್ಪ ಉಳಿದಿದ್ದರೆ ಅಭಿವ್ಯಕ್ತಿ ಸ್ವಾತಂತ್ರದ ಕಾರಣದಿಂದಲೇ ಆಗಿದೆ. ಯಾವಾಗ ಆ ಸ್ವಾತಂತ್ರಕ್ಕೆ ಸರಕಾರ ಕಡಿವಾಣ ಹಾಕಲು ಯತ್ನಿಸುತ್ತದೆಯೋ ಆಗ ದೇಶದ ಪ್ರಜಾಸತ್ತೆ ದುರ್ಬಲಗೊಳ್ಳುತ್ತದೆ. ಅಭಿವ್ಯಕ್ತಿ ಸ್ವಾತಂತ್ರವನ್ನು ಗೌರವಿಸುವುದು, ಈ ದೇಶದ ಪ್ರಜಾಸತ್ತೆಯನ್ನು ಗೌರವಿಸಿದಂತೆ. ಈ ದೇಶದ ಮೇಲಿನ ಕಾಳಜಿಯಿಂದ ವ್ಯಕ್ತವಾಗುವ ಅಭಿವ್ಯಕ್ತಿಗಳೇ ದೇಶವನ್ನು ಮುನ್ನಡೆಸುತ್ತದೆ. ವಾಸ್ತವಗಳನ್ನು ಬೆಟ್ಟು ಮಾಡಿ ತೋರಿಸಿದರೆ, ಅದನ್ನು ದೇಶದ್ರೋಹ ಎಂದು ಬಾಯಿ ಮುಚ್ಚಿಸುವುದರಿಂದ ಈ ದೇಶವನ್ನು ಕಟ್ಟುವುದಕ್ಕೆ ಸಾಧ್ಯವಿಲ್ಲ. ಕೊಳೆತು ನಾರುತ್ತಿರುವ ಹುಣ್ಣನ್ನು ಯಾರಿಗೂ ಕಾಣದಂತೆ ಮುಚ್ಚಿಟ್ಟರೆ, ಆ ಹುಣ್ಣು ವಾಸಿಯಾಗುತ್ತದೆಯೇ? ಯಾರಾದರೂ ಆ ಹುಣ್ಣಿನ ಕಡೆಗೆ ಕೈ ತೋರಿಸಿದರೆ, ಕೈ ತೋರಿಸಿದವ ಬೆರಳುಗಳನ್ನು ಕತ್ತರಿಸುವುದರಿಂದ ಹುಣ್ಣು ವಾಸಿಯಾಗುತ್ತದೆಯೆ? ಇಂದು ಅಮಿತ್ ಶಾ ನೇತೃತ್ವದಲ್ಲಿ ನಡೆಯುತ್ತಿರುವುದು ಇದೇ ಆಗಿದೆ. ಇಂದು ದೇಶವೆನ್ನುವ ದೇಹವನ್ನು ಕಾಡುತ್ತಿರುವ ಹುಣ್ಣಿನ ಬಗ್ಗೆ ಮಾತನಾಡಿದವರನ್ನು ದೇಶದ್ರೋಹಿಗಳು ಎಂದು ಬಾಯಿ ಮುಚ್ಚಿಸಲಾಗುತ್ತಿದೆ.
ವಿಪರ್ಯಾಸವೆಂದರೆ ನಕಲಿ ಗೋರಕ್ಷಕರು ಬೀದಿಯಲ್ಲಿ ಒಬ್ಬ ಅಮಾಯಕನನ್ನು ಬರ್ಬರವಾಗಿ ಥಳಿಸುವುದರಿಂದ ಈ ದೇಶದ ರಾಷ್ಟ್ರೀಯತೆಗೆ ಧಕ್ಕೆಯಾಗುತ್ತದೆ ಎಂದು ಅಮಿತ್ ಶಾ ಹೇಳಲಿಲ್ಲ. ಅದರಿಂದಾಗಿ ದೇಶದ ಮಾನ ಮರ್ಯಾದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗುತ್ತಿರುವುದರ ಬಗ್ಗೆ ಅವರು ವೌನವಾಗಿದ್ದರು. ಬದಲಿಗೆ, ಆ ಗೋರಕ್ಷಕರ ವಿರುದ್ಧ ಮಾತನಾಡಿದವರು ರಾಷ್ಟ್ರೀಯತೆಗೆ ಮಾರಕ ಎಂಬಂತಹ ಹೇಳಿಕೆಗಳನ್ನು ನೀಡಿದ್ದಾರೆ. ಬಹುಶಃ ಅಮಿತ್ ಅವರ ದೃಷ್ಟಿಯಲ್ಲಿ ಈ ನಕಲಿ ಗೋರಕ್ಷಕರೆಲ್ಲ ರಾಷ್ಟ್ರೀಯತೆಯ ಭಾಗವಾಗಿದ್ದಾರೆ. ಸಾರ್ವಜನಿಕವಾಗಿ ಸಮಾಜವನ್ನು ಒಡೆಯುವಂತಹ ನೀಚ ಹೇಳಿಕೆಗಳನ್ನು ನೀಡುವ ಪ್ರಮೋದ್ ಮುತಾಲಿಕ್, ತೊಗಾಡಿಯಾರಂತಹವರು ಇವರ ರಾಷ್ಟ್ರೀಯತೆಗೆ ಪೂರಕವಾಗಿದ್ದಾರೆ. ಇದೇ ಸಂದರ್ಭದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ವಿರುದ್ಧ ಧ್ವನಿಯೆತ್ತುವವರು ರಾಷ್ಟ್ರೀಯತೆಗೆ ಧಕ್ಕೆ ತರುತ್ತಾರೆ ಎಂದು ಅಮಿತ್ ಶಾ ಭಾವಿಸಿದ್ದಾರೆ. ಅಂದರೆ ಅಮಿತ್ ಶಾ ಎಂತಹ ರಾಷ್ಟ್ರವನ್ನು ಕಟ್ಟಲು ಮುಂದಾಗಿದ್ದಾರೆ ಎನ್ನುವುದನ್ನು ಇದು ಹೇಳುತ್ತದೆ. ಗುಜರಾತ್‌ನಲ್ಲಿ ಇದೇ ನಾಯಕರು ಅಭಿವ್ಯಕ್ತಿ ಸ್ವಾತಂತ್ರದ ಹೆಸರಿನಲ್ಲಿ ಮಾಡಿರುವ ಭಾಷಣಗಳನ್ನೊಮ್ಮೆ ನೆನೆದರೂ ಸಾಕು. ಗುಜರಾತ್ ಹತ್ಯಾಕಾಂಡದಲ್ಲಿ ಈ ಭಾಷಣಗಳ ಪಾತ್ರ ಏನು ಎನ್ನುವುದು ಇಡೀ ಜಗತ್ತಿಗೇ ಗೊತ್ತಿದೆ. ಇಂತಹ ಮಹನೀಯರು, ಮನುಷ್ಯರ ಕಗ್ಗೊಲೆಗಳ ವಿರುದ್ಧ ಧ್ವನಿಯೆತ್ತುತ್ತಿರುವವರು ರಾಷ್ಟ್ರೀಯತೆಗೆ ಮಾರಕ ಎಂಬರ್ಥದಲ್ಲಿ ಮಾತನಾಡಿರುವ ಉದ್ದೇಶವನ್ನು ನಾವು ಸುಲಭವಾಗಿ ಅರ್ಥೈಸಿಕೊಳ್ಳಬಹುದಾಗಿದೆ.
ಇಂದು ಕ್ರಿಮಿನಲ್‌ಗಳು ಗೋರಕ್ಷಣೆಯ ಮಾತನಾಡುತ್ತಿರುವಂತೆಯೇ, ರಾಷ್ಟ್ರೀಯತೆಯ ಕುರಿತಂತೆಯೂ ಮಾತನಾಡತೊಡಗಿದ್ದಾರೆ. ಅದರ ಮರೆಯಲ್ಲಿ ನಿಂತು ಅದೇನು ಕೃತ್ಯಗಳನ್ನು ಮಾಡಿದರೂ ಪಾರಾಗಬಹುದು ಎನ್ನುವುದನ್ನು ಅವರು ಅರ್ಥ ಮಾಡಿಕೊಂಡಿದ್ದಾರೆ. ಗೋರಕ್ಷಣೆಯ ಹೆಸರಿನಲ್ಲಿ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ಕೆಳಜಾತಿಗಳ ಮೇಲೆ ನಡೆಸುವ ಹಲ್ಲೆಗಳೆಲ್ಲವೂ ಇಂದು ಈ ರಾಷ್ಟ್ರೀಯತೆಯ ಭಾಗವೇ ಆಗಿದೆ. ಈ ನಕಲಿ ರಾಷ್ಟ್ರೀಯವಾದಿಗಳಿಗೆ ಸಂವಿಧಾನ ಶ್ರೀಸಾಮಾನ್ಯನಿಗೆ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರವೇ ದೊಡ್ಡ ಸಮಸ್ಯೆಯಾಗಿದೆ. ಸ್ವಾತಂತ್ರ ಹೋರಾಟದಲ್ಲಿ ಯಾವ ಪಾತ್ರವೂ ಇಲ್ಲದ ಮಂದಿ ಈ ದೇಶವನ್ನು ಇಂದು ಆಳುತ್ತಿದ್ದಾರೆ. ಅವರಿಗೆ ಈ ದೇಶದ ಸ್ವಾತಂತ್ರದ ಬಗ್ಗೆಯಾಗಲಿ, ಸಂವಿಧಾನದ ಬಗ್ಗೆಯಾಗಲಿ ಎಳ್ಳಷ್ಟೂ ಗೌರವವಿಲ್ಲ ಎನ್ನುವುದನ್ನು ನಾವು ಕಂಡುಂಡಿದ್ದೇವೆ. ಸ್ವಾತಂತ್ರ ಸಿಕ್ಕ ಸಂದರ್ಭದಲ್ಲಿ ಭಾರತ ಆಯ್ದುಕೊಂಡ ರಾಷ್ಟ್ರಧ್ವಜದ ಬಗ್ಗೆ ಅತ್ಯಂತ ನಿಕೃಷ್ಟವಾಗಿ ಲೇಖನಗಳನ್ನು ಬರೆದವರು ಆರೆಸ್ಸೆಸ್ ಮುಖಂಡರು. ಕಳೆದ ಎರಡು ದಶಕಗಳ ಹಿಂದೆ ತಮ್ಮ ಆರೆಸ್ಸೆಸ್ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸುವುದಕ್ಕೂ ಸಿದ್ಧರಿಲ್ಲದ ಜನರು ಇದೀಗ ತಿರಂಗಾ ಯಾತ್ರೆಯ ನಾಟಕವಾಡುತ್ತಿದ್ದಾರೆ. ತಿರಂಗಾವನ್ನು ಹಿಡಿದುಕೊಂಡೇ ತಿರಂಗಾದ ವಿರುದ್ಧ ಸಂಚು ಹೂಡಿದ್ದಾರೆ. ಹಾಗೆಯೇ ರಾಷ್ಟ್ರೀಯತೆಯನ್ನು ಮುಂದಿಟ್ಟುಕೊಂಡು ಈ ದೇಶದ ಸಂವಿಧಾನ ನೀಡಿದ ಹಕ್ಕುಗಳನ್ನೇ ಜನರಿಂದ ಕಸಿಯಲು ಹೊರಟಿದ್ದಾರೆ. ಅಮಿತ್ ಶಾ ಅವರ ಹೇಳಿಕೆ ಈ ಸಂಚಿನ ಭಾಗವಾಗಿದೆ. ಈ ದೇಶದಲ್ಲಿ ಎಲ್ಲಿಯವರೆಗೆ ಅಭಿವ್ಯಕ್ತಿ ಸ್ವಾತಂತ್ರ ಇರುತ್ತದೆಯೋ ಅಲ್ಲಿಯವರೆಗೆ ಈ ದೇಶ ಪ್ರಜಾಸತ್ತಾತ್ಮಕ ಸಾರ್ವಭೌಮ ದೇಶವಾಗಿ ಉಳಿಯುತ್ತದೆ. ಆದುದರಿಂದಲೇ ಸಂಘಪರಿವಾರದ ಕೆಂಗಣ್ಣು ಅಭಿವ್ಯಕ್ತಿ ಸ್ವಾತಂತ್ರದ ಮೇಲೆ ಬಿದ್ದಿದೆ. ಸಂಘಪರಿವಾರ ಅಮಿತ್ ಶಾರನ್ನು ಮುಂದಿಟ್ಟುಕೊಂಡು ಅವುಗಳ ಮೇಲೆ ದಾಳಿ ನಡೆಸ ಹೊರಟಿದೆ. ಈ ದಾಳಿಯನ್ನು ಪ್ರಜಾಸತ್ತೆಯ ಮೇಲೆ ನಂಬಿಕೆಯಿರುವ ಎಲ್ಲರೂ ಒಂದಾಗಿ ಎದುರಿಸಬೇಕಾಗಿದೆ. ಮತ್ತು ತಮ್ಮ ಅಭಿವ್ಯಕ್ತಿಯ ಧ್ವನಿಯನ್ನು ಇನ್ನಷ್ಟು ಎತ್ತರಿಸಬೇಕಾಗಿದೆ.







