ಫಲಾನುಭವಿಗಳಿಲ್ಲದೆ ಬಾಕಿಯಾಗಿವೆ ಬಸವ ವಸತಿ ಯೋಜನೆಯ 1,843 ಮನೆಗಳು
ನಿವೇಶನರಹಿತ ಪತ್ರಕರ್ತರಿಗೆ ನಿವೇಶನ

ಮಂಗಳೂರು, ಆ.23:ಮಂಗಳೂರು ತಾಲೂಕು ಪಂಚಾಯತ್ ವ್ಯಾಪ್ತಿಗೆ ಬಸವ ವಸತಿ ಯೋಜನೆಯಲ್ಲಿ ಮಂಜೂರಾತಿಯಾದ 4,300 ಮನೆಗಳಲ್ಲಿ 1,843 ಮನೆ ಫಲಾನುಭವಿಗಳಿಲ್ಲದೆ ಬಾಕಿಯಾಗಿದೆ ಎಂದು ಮಂಗಳೂರು ತಾ.ಪಂ ಅಧ್ಯಕ್ಷ ಮುಹಮ್ಮದ್ ಮೋನು ತಿಳಿಸಿದ್ದಾರೆ.
ಮಂಗಳೂರು ತಾ.ಪಂ. ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ.ಜಾತಿಯ 929, ಪ.ಪಂಗಡ 333, ಸಾಮಾನ್ಯ581 ಮನೆಗಳಿಗೆ ಅರ್ಹ ಫಲಾನುಭವಿಗಳು ಸಿಕ್ಕಿಲ್ಲ. ಈ ಬಗ್ಗೆ ಸಭೆ ನಡೆಸಿ 55 ಗ್ರಾಮಗಳ ಪಿಡಿಒಗಳು ತಮ್ಮ ಗ್ರಾಮದಲ್ಲಿ ಇರುವ ಫಲಾನುಭವಿಗಳ ಪಟ್ಟಿಯನ್ನು ಆ.30 ರೊಳಗೆ ಸಲ್ಲಿಸಬೇಕು. ನಂತರ ಪಲಾನುಭವಿಗಳು ಅರ್ಜಿ ಕೊಟ್ಟರೆ ಪಿಡಿಒಗಳು ನೇರ ಹೊಣೆಯಾಗಿದ್ದು ಅವರ ಬಗ್ಗೆ ಸರಕಾರದ ಗಮನಕ್ಕೆ ತರಿಸಲಾಗುವುದು ಎಂದರು.
ಫಲಾನುಭವಿಗಳು ಇಲ್ಲದೆ 22,11,60,000 ರೂ. ಮಂಗಳೂರು ತಾ.ಪಂ. ವ್ಯಾಪ್ತಿಗೆ ಬರುವುದು ತಪ್ಪುತ್ತದೆ ಎಂದು ಹೇಳಿದರು.ಪ್ರತಿ ಗ್ರಾಮ ಪಂಚಾಯತ್‌ನಲ್ಲಿ ಘನ ತ್ಯಾಜ್ಯ ಘಟಕ ಸ್ಥಾಪನೆಗೆ ಆಯಾ ಗ್ರಾಮದ ಪಿಡಿಒಗಳು ಕ್ರಮ ಕೈಗೊಳ್ಳಬೇಕೆಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ತಾ.ಪಂ ಉಪಾಧ್ಯಕ್ಷೆ ಪೂರ್ಣಿಮಾ ಗಣೇಶ್, ಸ್ಥಾಯಿ ಸಮಿತಿ ಅಧ್ಯಕ್ಷೆ ರೀಟಾ ಕುಟಿನ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು.
ನಿವೇಶನ ರಹಿತ ಪತ್ರಕರ್ತರಿಗೆ 5 ಸೆಂಟ್ಸ್ ಜಾಗ
ಗ್ರಾಮಾಂತರ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ನಿವೇಶನ ರಹಿತ ಪತ್ರಕರ್ತರಿಗೆ 5 ಸೆಂಟ್ಸ್ ಜಾಗವನ್ನು ನೀಡುವ ಚಿಂತನೆಯಿದೆ. ಈ ನಿಟ್ಟಿನಲ್ಲಿ ಅರ್ಹರನ್ನು ಗುರುತಿಸಲು ಗ್ರಾ.ಪಂ. ಅಧಿಕಾರಿಗಳಿಗೆ ಸೂಚಿಸಲಾಗುವುದು. ಈ ಬಗ್ಗೆ ಮುಂದಿನ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಮಂಗಳೂರು ತಾ. ಪಂ ಅಧ್ಯಕ್ಷ ಮುಹಮ್ಮದ್ ಮೋನು ತಿಳಿಸಿದರು.







