ಸೌದಿ ಅರೇಬಿಯ: ನಾಪತ್ತೆಯಾಗಿದ್ದ ಭಾರತೀಯನ ಮೃತದೇಹ ಶವಾಗಾರದಲ್ಲಿ ಪತ್ತೆ

ರಿಯಾದ್, ಅಗಸ್ಟ್ 23: ಕಳೆದ ಜುಲೈ 23ಕ್ಕೆ ವಾಹನ ಸಹಿತ ನಾಪತ್ತೆಯಾಗಿದ್ದ ಆಂಧ್ರ ನಿವಾಸಿಯೊಬ್ಬರ ಮೃತದೇಹ ಮೂರುವಾರಗಳ ಬಳಿಕ ಆಸ್ಪತ್ರೆಯ ಶವಾಗಾರದಲ್ಲಿ ಪತ್ತೆಯಾಗಿದೆ.ಸಾಜಿರ್ ಎಂಬಲ್ಲಿಂದ ರಿಯಾದ್ ಗೆ ಪ್ರಯಾಣಿಸುತ್ತಿದ್ದ ವೇಳೆ ನಾಪತ್ತೆಯಾಗಿದ್ದ ವಹೀದ್ ಖಾನ್‌ರ ಮೃತದೇಹವನ್ನು ರಿಯಾದ್ ಬದೀಅದ ಕಿಂಗ್ ಸಲ್ಮಾನ್ ಆಸ್ಪತ್ರೆಯಲ್ಲಿ ಸಂಬಂಧಿಕರು ಗುರುತಿಸಿದ್ದಾರೆ. ಶುಕ್ರವಾರ ಸಾಜಿರ್‌ನಲ್ಲಿ ಶವಸಂಸ್ಕಾರ ನೆರವೇರಿಸಲಾಯಿತು ಎಂದು ವರದಿಯಾಗಿದೆ.
ವಹೀದ್ ಖಾನ್ ಚಲಾಯಿಸುತ್ತಿದ್ದ ವಾಹನ ಪಲ್ಟಿಯಾಗಿ ಅವರು ಮೃತರಾಗಿದ್ದರು. ಅವರು ಸಾಜಿರ್‌ನ ವ್ಯಾಪಾರಿಸಂಸ್ಥೆಗಳಿಗೆ ಆವಶ್ಯಕ ಸಾಮಗ್ರಿಗಳನ್ನು ಪೂರೈಸುವ ಉದ್ಯೋಗ ಮಾಡುತ್ತಿದ್ದರು. ಜುಲೈ 23ರಂದು ಬೆಳಗ್ಗೆ 11 ಗಂಟೆಗೆ ಸಾಜಿರ್‌ನಿಂದ ತನ್ನ ಪಿಕಪ್ ವಾಹನದಲ್ಲಿ ಹೊರಟಿದ್ದ ಅವರು ನಂತರ ನಾಪತ್ತೆಯಾಗಿದ್ದರು. ಸಾಮಗ್ರಿಗಳನ್ನು ತರಲಿಕ್ಕಾಗಿ ನೀಡಿದ್ದ ಹಣವೂ ಅವರ ಕೈಯಲ್ಲಿತ್ತು ಎನ್ನಲಾಗಿದೆ. ಅಂದು ಸಂಜೆ ವಹೀದ್‌ಖಾನ್‌ರ ಗೆಳೆಯ ಫೋನ್ ಮಾಡಿದಾಗ ಬೇರೆಯಾರೋ ಅರೇಬಿಕ್ ಭಾಷೆಯಲ್ಲಿ ವಹೀದ್ ಇಲ್ಲ ಎಂದು ಹೇಳಿ ಮೊಬೈಲ್ ಫೋನ್ ಬಂದ್ ಮಾಡಿದ್ದರು. ನಂತರ ಕರೆ ಮಾಡಿದಾಗ ಸ್ವಿಚ್‌ಆಫ್ ಆಗಿತ್ತು. ನಂತರ ವಹೀದ್‌ಖಾನ್‌ರ ಸ್ಫೋನ್ಸರ್ ಪೊಲೀಸರಿಗೆ ದೂರು ನೀಡಿದ್ದರು. ಪಿಕ್‌ಅಪ್ ವ್ಯಾನ್ ರಸ್ತೆಯ ಡಿವೈಡರ್‌ಗೆ ಢಿಕ್ಕಿಹೊಡೆದಿತ್ತು. ರಿಯಾದ್ ಪೊಲೀಸರು ಅವರನ್ನು ಆಸ್ಪತ್ರೆಗೆ ಸೇರಿಸಿದ್ದರು. ಐದು ದಿನಗಳ ಚಿಕಿತ್ಸೆಯ ಬಳಿಕ ಅವರು ಆಸ್ಪತ್ರೆಯಲ್ಲಿ ಮೃತರಾಗಿದ್ದರು ಎಂದು ವರದಿ ತಿಳಿಸಿದೆ.





