ಬೆಸೆಂಟ್ ಸಂಧ್ಯಾ ಕಾಲೇಜಿನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ

ಮಂಗಳೂರು, ಆ.23:ಬೆಸೆಂಟ್ ಸಂಧ್ಯಾ ಕಾಲೇಜು ನೇತೃತ್ವದಲ್ಲಿ ಬೆಸೆಂಟ್ ವುಮೆನ್ ಕಾಲೇಜು, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ, ಮಂಗಳೂರು ವಿವಿಯ ಕೊಂಕಣಿ ಅಧ್ಯಯನ ಪೀಠದ ಸಹಯೋಗ ದಲ್ಲಿ ಯುಜಿಸಿ ಪ್ರಾಯೋಜಕತ್ವದಲ್ಲಿ ಕರಾವಳಿ ಕರ್ನಾಟಕದ ಕೊಂಕಣಿ ಭಾಷಿಕರು ಮತ್ತು ಆಂಗ್ಲ ಪೋರ್ಚುಗೀಸ್ ನೊಂದಿಗೆ ಅವರ ಸಂಬಂದ ಕುರಿತಾದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಬೆಸೆಂಟ್ ಸಂಧ್ಯಾ ಕಾಲೇಜಿನ ಸಭಾಂಗಣದಲ್ಲಿ ಶಾಸಕ ಜೆ.ಆರ್. ಲೋಬೊ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಭಾಷೆಯು ಕೇವಲ ಸಂವಹನ ಮಾಧ್ಯಮವಾಗಿರದೆ, ಸಂಸ್ಕೃತಿ ಹಾಗೂ ವೈವಿಧ್ಯತೆಯನ್ನೂ ಬಿಂಬಿಸುತ್ತದೆ . ಈ ಹಿಂದೆ ಜಗತ್ತಿನಾದ್ಯಂತ ಸಾಕಷ್ಟು ಭಾಷೆಗಳಿದ್ದರೂ, ಪ್ರಸ್ತುತ, ಹಲವು ಭಾಷೆಗಳು ವಿನಾಶದಂಚಿನಲ್ಲಿವೆ. ಒಂದು ಭಾಷೆ ವಿನಾಶದಂಚಿಗೆ ಸಾಗುತ್ತಿದೆ ಎಂದರೆ ಸಂಸ್ಕೃತಿ ಹಾಗೂ ಪರಂಪರೆಗಳು ಕೂಡಾ ವಿನಾಶಗೊಳ್ಳುತ್ತಿವೆ ಎಂದರ್ಥ ಎಂದು ಹೇಳಿದರು.
ಹಿಂದಿನ ಕಾಲದಲ್ಲಿ ಸಂಸ್ಕೃತ ಭಾಷೆ ವಿಶ್ವವಿದ್ಯಾನಿಲಯದ ಭಾಷೆಯಾಗಿತ್ತು. ಆದರೆ, ಇಂದಿನ ಕಾಲದಲ್ಲಿ ಬಹಳಷ್ಟು ಕಡಿಮೆ ಪ್ರಮಾಣದಲ್ಲಿ ಜನರು ಸಂಸ್ಕೃತದಲ್ಲಿ ಸಂವಹನ ಮಾಡುತ್ತಿದ್ದಾರೆ. ಭಾಷೆಯನ್ನು ಬೆಳೆಸಲು ಶ್ರೀಮಂತ, ಬಡವರೆನ್ನದೆ ಪ್ರತಿಯೊಬ್ಬರ ಸಹಾಯವೂ ಬೇಕಾಗಿದ್ದು, ಹೆಚ್ಚು ಜನರು ಕಲಿತಂತೆ ಭಾಷೆ ಬೆಳೆಯುತ್ತದೆ. ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರು ಕೂಡಾ ಕೊಂಕಣಿ ಭಾಷೆ ಬಲ್ಲವರಾಗಿದ್ದಾರೆಂಬುದು ಈ ಭಾಷೆಯ ವಿಶೇಷತೆಯಾಗಿದ್ದು, ಇತರ ಭಾಷೆಗಳೊಂದಿಗೂ ಕೂಡಾ ಕೊಂಕಣಿ ಸಂಬಂಧ ಹೊಂದಿದೆ. ಈ ನಿಟ್ಟಿನಲ್ಲಿ ಕೊಂಕಣಿ ಭಾಷೆಯನ್ನು ಉಳಿಸಿ, ಬೆಳೆಸುವ ಕಾರ್ಯವನ್ನು ಪ್ರತಿಯೊಬ್ಬರೂ ನಡೆಸಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಶ್ವ ಕೊಂಕಣಿ ಕೇಂದ್ರದ ನಿರ್ದೇಶಕ ಬಸ್ತಿ ವಾಮನ ಶೆಣೈ, ಕೊಂಕಣಿ ಅಧ್ಯಯನ ಪೀಠದ ಸಂಯೋಜಕ ಜಯವಂತ ನಾಯಕ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ರಾಯ್ ಕ್ಯಾಸ್ಟಲಿನೋ, ವುಮೆನ್ಸ್ ನ್ಯಾಷನಲ್ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಕುಡ್ಪಿ ಜಗದೀಶ್ ಶೆಣೈ, ಬೆಸೆಂಟ್ ವುಮೆನ್ಸ್ ಕಾಲೇಜಿನ ಸಂಯೋಜಕ ದೇವಾನಂದ ಪೈ, ಸಂಶೋಧಕ ಅಲೆನ್ ಮಚಾದೋ, ನಾರಾಯಣ್ ಶೆಣೈ, ಬೆಸೆಂಟ್ ವುಮೆನ್ಸ್ ಕಾಲೇಜು ಪ್ರಾಂಶುಪಾಲ ಸತೀಶ್ ಕುಮಾರ್ ಶೆಟ್ಟಿ, ಬೆಸೆಂಟ್ ಸಂಧ್ಯಾ ಕಾಲೇಜು ಪ್ರಾಂಶುಪಾಲ ಡಾ. ಕಾರ್ಮೆಲಿಟ ಗೋವಿಯಸ್ ಮೊದಲಾದವರು ಉಪಸ್ಥಿತರಿದ್ದರು.







