ಮುಂಬೈಯಲ್ಲಿ 100 ಕೋ.ರೂ.ಗೆ ವಿಲಾಸಿ ಫ್ಲ್ಯಾಟ್ ಖರೀದಿಸಿದ ಕಾಂಗ್ರೆಸ್ ಮುಖಂಡನ ಪುತ್ರ

ಮುಂಬೈ, ಆ.23: ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಬಿಹಾರದ ಮಾಜಿ ರಾಜ್ಯಪಾಲ ಡಿ.ವೈ. ಪಾಟೀಲ್ ಅವರ ಪುತ್ರ ಅಜಿಂಕ್ಯ ಪಾಟೀಲ್ ವೊರ್ಲಿಯ ಸಿಲ್ವರೀನ್ ಟರೇಸ್‌ನಲ್ಲಿ 100 ಕೋ.ರೂ.ಗೆ ಟ್ರಿಪಲ್ ಡುಪ್ಲೆಕ್ಸ್ ವಿಲಾಸಿ ಫ್ಲ್ಯಾಟ್ ಖರೀದಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಸಮುದ್ರಾಭಿಮುಖವಾಗಿರುವ ಈ 23 ಮಹಡಿಗಳ ಕಟ್ಟಡದ ಫ್ಲ್ಯಾಟ್‌ಗಳಿಗೆ ಹಲವು ಪ್ರತಿಷ್ಠಿತ ವ್ಯಕ್ತಿಗಳಿಂದ ಬಹಳ ಬೇಡಿಕೆಯಿದ್ದು ಫ್ಲ್ಯಾಟ್‌ಗಳಿಗೆ ಬೇಡಿಕೆ ಕುಸಿಯುತ್ತಿರುವ ಇಂದಿನ ಸಂದರ್ಭದಲ್ಲಿ ರಾಜಕೀಯ ನಾಯಕರೊಬ್ಬರ ಪುತ್ರ ಇಷ್ಟೊಂದು ದೊಡೆ ಮೊತ್ತದ ಮನೆ ಖರೀದಿಸಿರುವುದು ಇತ್ತೀಚಿಗಿನ ವರ್ಷಗಳಲ್ಲಿಯೇ ಮೊದಲು ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರಈ ಫ್ಲ್ಯಾಟನ್ನು ಪಾಟೀಲ್ ಅವರ ಸಂಸ್ಥೆ ಎಐಪಿಎಸ್ ರಿಯಲ್ ಎಸ್ಟೇಟ್ ಖರೀದಿಸಿದ್ದು ದಾಖಲೆಗಳಿಗೆ ಅದರ ನಿರ್ದೇಶಕರಲ್ಲೊಬ್ಬರಾದ ರಾಜೇಶ್ ರಾವೊರಾನೆ ಸಹಿ ಹಾಕಿದ್ದಾರೆ. ಫ್ಲ್ಯಾಟ್‌ನ ಒಟ್ಟು ವೆಚ್ಚ 95.4 ಕೋಟಿ ರೂ. ಆಗಿದ್ದರೆ, ಸ್ಟ್ಯಾಂಪ್ ಡ್ಯೂಟಿ 4.7 ಕೋಟಿ ರೂ. ಅಷ್ಟಾಗಿದೆಯೆಂದು ತಿಳಿದುಬಂದಿದೆ.
ಪಾಟೀಲ್ 21ನೆ ಮಹಡಿಯಲ್ಲಿ ಒಂದು ಫ್ಲ್ಯಾಟ್ ಖರೀದಿಸಿದ್ದರೆ ಇನ್ನೆರಡು ಫ್ಲ್ಯಾಟ್‌ಗಳು 22ನೆ ಹಾಗೂ 23ನೆ ಮಹಡಿಗಳಲ್ಲಿವೆ. ಈ ಫ್ಲ್ಯಾಟ್‌ಗಳಿಗೆ ಟೆರೇಸ್ ಇದ್ದು, ಮೂರನೆ ಹಂತದಲ್ಲಿ ಪಾರ್ಕಿಂಗ್ ವ್ಯವಸ್ಥೆಯಿದೆ.
ಈ ಫ್ಲ್ಯಾಟ್ ಮೇಲಿನ ಹೂಡಿಕೆ ಉತ್ತಮವೆಂದು ಕಂಪೆನಿ ಅದನ್ನು ಖರೀದಿಸಿದೆ ಎಂದು ಕಂಪೆನಿಯ ವಕ್ತಾರ ದಿಲೀಪ್ ಕಾವಡ್ ಹೇಳಿದ್ದಾರೆ.
ಈ ಹಿಂದೆ ಸಿಲ್ವರೀನ್ ಬಂಗಲೆಯೆಂಬ ಕಟ್ಟಡ ಇದ್ದ ಜಾಗದಲ್ಲಿ ಈ ಅಪಾರ್ಟ್‌ಮೆಂಟ್ ಕಟ್ಟಡವಿದೆ. ಈ ಜಾಗದ ಪುನರ್ ಅಭಿವೃದ್ಧಿ ಹಕ್ಕುಗಳನ್ನು 2009ರಲ್ಲಿ ನೋಶಿರ್ ತಲಟಿ ಎಂಬವರು ಪಡೆದಿದ್ದರು. ಇದಾದ ನಾಲ್ಕು ವರ್ಷಗಳ ನಂತರ ಉದ್ಯಮಿ ಅವಿನಾಶ್ ಭೊಸಲೆಯವರ ಪುತ್ರಿ ಸ್ವಪ್ನಾಲಿ 75 ಕೋಟಿ ರೂ. ಪಾವತಿಸಿ ಡುಪ್ಲೆಕ್ಸ್ ಫ್ಲ್ಯಾಟನ್ನು 19ನೆ ಹಾಗೂ 20ನೆ ಮಹಡಿಗಳಲ್ಲಿ ಖರೀದಿಸಿದ್ದರು.







