ಉಚಿತ ಅಡುಗೆ ಅನಿಲಕ್ಕಾಗಿ ಈ ಬಡ ದಲಿತ ಕಾರ್ಮಿಕ ಎರಡನೆ ಮದುವೆಯಾಗಲೇಬೇಕು !

ಲಕ್ನೋ, ಆ.23: ಇಲ್ಲಿಂದ 90 ಕಿ.ಮೀ. ದೂರದಲ್ಲಿರುವ ಸೀತಾಪುರ ಜಿಲ್ಲೆಯ ಜುಧೌರ್ ಗ್ರಾವದ ಬಡ ದಲಿತ ಭೂರಹಿತ ದಿನಗೂಲಿ ಕಾರ್ಮಿಕನಾದ ಪುಟ್ಟಿಲಾಲ್ ಗೌತಮ್ ವಿಚಿತ್ರ ಪರಿಸ್ಥಿತಿಯನ್ನೆದುರಿಸುತಿದ್ದಾನೆ. 45 ವರ್ಷದ ವಿಧುರನಾಗಿರುವ ಈತ ತನ್ನ ಮನೆಯ ಒಲೆ ಉರಿಯಬೇಕಾದರೆ ಈಗ ಎರಡನೇ ವಿವಾಹವಾಗಲೇ ಬೇಕು ಆದರೆ ಆತನ ನಾಲ್ಕು ಮಂದಿ ಮಕ್ಕಳು ಆತನ ಎರಡನೆ ವಿವಾಹವಾಗುವ ಯೋಚನೆಯ ವಿರುದ್ಧವಾಗಿದ್ದಾರೆ. ಸರಕಾರದ ನಿಯಮಗಳ ಪ್ರಕಾರ ಆತ ತನ್ನ ಮನೆಗೆ ಪ್ರಧಾನಮಂತ್ರಿ ಉಜ್ವಲ ಯೋಜನೆಯಂಗವಾಗಿ ಉಚಿತ ಅಡುಗೆ ಅನಿಲ ಸಂಪರ್ಕ ಪಡೆಯಬೇಕಾದಲ್ಲಿ ಆತನಿಗೆ ಪತ್ನಿಯಿರಲೇಬೇಕು. ಆತನ ಪುತ್ರಿಯರು ಇನ್ನೂ ಚಿಕ್ಕವರಾಗಿರುವುದರಿಂದ ಅವರ ಹೆಸರಿನಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸಲು ಆತನಿಗೆ ಸಾಧ್ಯವಿಲ್ಲ.
ಕಳೆದ ಹಲವಾರು ದಿನಗಳಿಂದ ಆತ ಸಂಬಂಧಿತ ಇಲಾಖೆಯ ಕಚೇರಿಗೆ ಅಲೆದಾಡುತ್ತಿದ್ದರೂ ಆತ ಬರಿಗೈಯಲ್ಲೇ ಮರಳಬೇಕಾಗಿ ಬಂದಿದೆ.
‘‘ನನ್ನ ಪತ್ನಿಯನ್ನು ಸೂಕ್ತ ದಾಖಲೆಗಳೊಂದಿಗೆ ಕಚೇರಿಗೆ ಬರಲು ಅವರು ಹೇಳಿದ್ದಾರೆ. ನನ್ನ ಪತ್ನಿ ಈಗ ಬದುಕಿಲ್ಲ ಹಾಗೂ ನನಗೆ ಸಾಕಲು ನಾಲ್ಕು ಮಂದಿ ಮಕ್ಕಳಿದೆಯೆಂದು ಅವರಲ್ಲಿ ಹೇಳಿದರೂ ಪ್ರಯೋಜನವಾಗಿಲ್ಲ. ಅವರು ನನ್ನ ಮಾತನ್ನು ಕೇಳುತ್ತಿಲ್ಲ. ನಿಯಮವೆಂದರೆ ನಿಯಮ ಎನ್ನುತ್ತಾರೆ’’ ಎಂದು ಗೌತಮ್ ವಿವರಿಸುತ್ತಾನೆ.
ಆತನ ಪತ್ನಿ ಗೌರಿ ಅಸೌಖ್ಯದಿಂದ ಎರಡು ವರ್ಷಗಳ ಹಿಂದೆ ತೀರಿಕೊಂಡಿದ್ದಳು. ‘‘ನನಗೀಗ ಮಾರುಕಟ್ಟೆಯಿಂದ ಕಟ್ಟಿಗೆ ಹಾಗೂ ಸೀಮೆಎಣ್ಣೆ ಖರೀದಿಸುವ ಅನಿವಾರ್ಯತೆಯಿದೆ. ಆದರೆ ಕಟ್ಟಿಗೆ ಬೆಲೆ ಮಳೆಯಿಂದಾಗಿ ಕ್ವಿಂಟಾಲ್‌ಗೆ ರೂ. 500ರಷ್ಟಿದೆ. ನನ್ನಿಂದ ಅದನ್ನು ಖರೀದಿಸಲು ಅಸಾಧ್ಯ’’ ಎಂದು ಆತ ತನ್ನ ಸಮಸ್ಯೆಯನ್ನು ವಿವರಿಸುತ್ತಾನೆ. ಪ್ರಸಕ್ತ ಆತ ತನ್ನ ಮಕ್ಕಳನ್ನು ಹತ್ತಿರದ ಕಾಡಿಗೆ ಕಳುಹಿಸಿ ಮರದ ಕೊಂಬೆ ಹಾಗೂ ತರಗೆಲೆಗಳನ್ನು ತರಿಸುತ್ತಾನೆ. ಆತನ ಪುತ್ರಿಯರು ಮಣ್ಣಿನ ಒಲೆಯಲ್ಲಿ ಅಡುಗೆ ಮಾಡಲು ಆತನಿಗೆ ಸಹಾಯ ಮಾಡುತ್ತಾರೆ.
ಆತ ತನ್ನ ಸಮಸ್ಯೆಯನ್ನು ಊರಿನ ಹಿರಿಯರಲ್ಲಿ ಹೇಳಿದಾಗ ಅವರು ಮರು ವಿವಾಹವಾಗಲು ಸಲಹೆ ನೀಡಿದ್ದಾರೆ. ‘‘ಆದರೆ ನನ್ನ ಮಕ್ಕಳು ಇದನ್ನು ವಿರೋಧಿಸಿದ್ದಾರೆ. ಅವರಿಗೆ ಮಲತಾಯಿ ಬೇಕಿಲ್ಲವಂತೆ’’ ಎಂದು ಗೌತಮ್ ಹೇಳುತ್ತಾನೆ.
ಈ ಯೋಜನೆಯ ನಿಯಮಗಳನ್ನು ಪ್ರಧಾನಿ ತಿದ್ದುಪಡಿ ಮಾಡಬೇಕು, ನನ್ನಂತಹ ವಿಧುರರು ಅದರ ಪ್ರಯೋಜನ ಪಡೆಯಲು ಸಾಧ್ಯವಿಲ್ಲ’’ ಎಂದು ಆತ ಬೇಸರದಿಂದ ನುಡಿಯುತ್ತಾನೆ.







