ಕುಷ್ಠರೋಗಕ್ಕೆ ಪ್ರಪ್ರಥಮ ವ್ಯಾಕ್ಸಿನ್: ಭಾರತದ ಐತಿಹಾಸಿಕ ಸಾಧನೆ

ಹೊಸದಿಲ್ಲಿ, ಆ.23: ಕುಷ್ಠರೋಗ ಚಿಕಿತ್ಸೆಯಲ್ಲಿ ಅಪ್ರತಿಮ ಸಾಧನೆ ಮಾಡಿ ಭಾರತದ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಇಮ್ಯೂನಾಲಜಿ ಇತಿಹಾಸ ಸೃಷ್ಟಿಸಿದೆ. ಜಗತ್ತಿನಲ್ಲೇ ಪ್ರಥಮಬಾರಿಗೆ ಭಾರತ ಕುಷ್ಠರೋಗ ಪ್ರತಿರೋಧಕ ವ್ಯಾಕ್ಸಿನ್‌ನ್ನು ಅಭಿವೃದ್ಧಿ ಪಡಿಸಿದ್ದು, ಸದ್ಯವೇ ರೋಗಿಗಳಿಗೆ ಇದರ ಬಳಕೆಯನ್ನು ಪ್ರಾರಂಭಿಸಲಾಗುವುದು ಎಂದು ವರದಿಯಾಗಿದೆ. ಈಗಿರುವ ಮಲ್ಟಿ ಡ್ರಗ್ ತೆರಪಿ ಎಂದು ಹೇಳಲಾಗುತ್ತಿರುವ ಕುಷ್ಠರೋಗದ ಚಿಕಿತ್ಸೆಯು ಒಂದಕ್ಕಿಂತ ಹೆಚ್ಚು ಆ್ಯಂಟಿ ಬಯೋಟಿಕ್‌ಗಳನ್ನು ಏಕಕಾಲದಲ್ಲಿ ಉಪಯೋಗಿಸುವ ರೀತಿ ಚಾಲ್ತಿಯಲ್ಲಿದೆ. ಆದರೆ ಈ ಔಷಧವನ್ನು ರೋಗಾಣುಗಳು ಪ್ರತಿರೋಧಿಸುವುದು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಸಂಶೋಧಕರು ಹೊಸ ಔಷಧಕಂಡುಹುಡುಕುವ ಪ್ರಯೋಗಕ್ಕಿಳಿದಿದ್ದರು ಎನ್ನಲಾಗಿದೆ. ವರ್ಷಗಳ ಕಾಲ ನಡೆಸಿದ ಪ್ರಯೋಗದಲ್ಲಿ ಕುಷ್ಠರೋಗ ನಿವಾರಣೆಗೆ ಉಪಯುಕ್ತ ಔಷಧವನ್ನು ಸಂಶೋಧಕರು ಕಂಡು ಹುಡುಕಿದ್ದಾರೆ.
ಹೊಸ ವ್ಯಾಕ್ಸಿನ್‌ನ ಮೊದಲ ಹಂತದ ಪ್ರಯೋಗವನ್ನು ಬಿಹಾರ, ಗುಜರಾತ್‌ಗಳ ಐದು ಜಿಲ್ಲೆಗಳಲ್ಲಿ ಆರಂಭಿಸಲಾಗುವುದು. ನ್ಯಾಶನಲ್ ಇನ್ಸಿಟಿಟ್ಯೂಟ್ ಆಫ್ ಇಮ್ಯುನಾಲಜಿ ಸ್ಥಾಪಕ ನಿರ್ದೇಶಕ ಜಿ.ಪಿ.ತಲ್ವಾರ್ ನೇತೃತ್ವದ ತಂಡ ಹೊಸ ವ್ಯಾಕ್ಸಿನ್ ಕಂಡು ಹುಡುಕಿದೆ ಎಂದು ವರದಿ ತಿಳಿಸಿದೆ.





