ಸುದ್ದಿಗೋಷ್ಠಿ ಕರೆದು ಶಾಲಾ ಬ್ಯಾಗ್ ಹೊರುವ ಸಂಕಷ್ಟ ತೋಡಿಕೊಂಡ ವಿದ್ಯಾರ್ಥಿಗಳು

ಚಂದ್ರಾಪುರ(ಮಹಾರಾಷ್ಟ್ರ),ಆ.23: ಭಾರವಾದ ಶಾಲಾ ಬ್ಯಾಗ್‌ಗಳನ್ನು ಹೊತ್ತು ಬೇಸತ್ತ ಏಳನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಇಲ್ಲಿ ಸುದ್ದಿಗೋಷ್ಠಿಯೊಂದನ್ನು ಕರೆದು ದಿನನಿತ್ಯವೂ ಶಾಲೆಗೆ 5-7 ಕೆ.ಜಿ.ಭಾರವನ್ನು ಹೆಗಲ ಮೇಲೆ ಹೊತ್ತುಕೊಂಡು ತೆರಳುವ ವಿದ್ಯಾರ್ಥಿಗಳ ಸಂಕಷ್ಟವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಸ್ಥಳೀಯ ವಿದ್ಯಾ ನಿಕೇತನ ಶಾಲೆಯ ಏಳನೆಯ ತರಗತಿಯ ವಿದ್ಯಾರ್ಥಿಗಳಿಬ್ಬರು ನಿನ್ನೆ ಸ್ಥಳೀಯ ಪ್ರೆಸ್‌ಕ್ಲಬ್‌ಗೆ ತೆರಳಿ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲು ಸುದ್ದಿಗೋಷ್ಠಿ ನಡೆಸಲು ಬಯಸಿರುವುದಾಗಿ ಹೇಳಿದಾಗ ಅಲ್ಲಿದ್ದ ಮಾಧ್ಯಮ ಪ್ರತಿನಿಧಿಗಳು ಚಕಿತರಾಗಿದ್ದರು.
ನಾವು ಪ್ರತಿದಿನವೂ ಎಂಟು ವಿಷಯಗಳ ಕನಿಷ್ಠ 16 ಪುಸ್ತಕಗಳನ್ನು ಶಾಲೆಗೆ ಒಯ್ಯಬೇಕಾಗುತ್ತದೆ. ಕೆಲವು ದಿನಗಳಲ್ಲಿ ಈ ಸಂಖ್ಯೆ 18 ಅಥವಾ 20 ಆಗುವುದೂ ಇದೆ. ಐದರಿಂದ ಏಳು ಕೆಜಿ ತೂಕದ ಈ ಪುಸ್ತಕಗಳನ್ನು ಹೊತ್ತುಕೊಂಡು ಮೂರನೇ ಮಹಡಿಯಲ್ಲಿರುವ ತರಗತಿಗೆ ಹೋಗುವಷ್ಟರಲ್ಲಿ ನಮಗೆ ಸಾಕುಬೇಕಾಗಿರುತ್ತದೆ ಎಂದು ಸುಮಾರು 12ರ ಪ್ರಾಯದ ಈ ವಿದ್ಯಾರ್ಥಿಗಳು ಸುದ್ದಿಗೋಷ್ಠಿಯಲ್ಲಿ ಅಳಲು ತೋಡಿಕೊಂಡರು. ಪುಸ್ತಕಗಳ ಹೊರೆಯನ್ನು ತಗ್ಗಿಸುವಂತೆ ನಮ್ಮ ಪ್ರಾಂಶುಪಾಲರಿಗೆ ಮನವಿಗಳನ್ನು ಸಲ್ಲಿಸಿದ್ದೆವಾದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ಹೇಳಿದರು.
ತಮ್ಮ ಪ್ರತಿದಿನದ ವರ್ಕ್ ಬುಕ್‌ಗಳನ್ನು ಶಾಲೆಯಲ್ಲಿಯೇ ಇರಿಸಲು ಅಧಿಕಾರಿಗಳು ವ್ಯವಸ್ಥೆಯನ್ನು ಕಲ್ಪಿಸಬೇಕು ಮತ್ತು ದಿನವೊಂದರ ಪಿರಿಯಡ್‌ಗಳ ಸಂಖ್ಯೆಗಳನ್ನು ತಗ್ಗಿಸಬೇಕು ಎಂಬ ಸಲಹೆಗಳನ್ನು ಈ ವಿದ್ಯಾರ್ಥಿಗಳು ಮುಂದಿಟ್ಟರು. ಸುದ್ದಿಗೋಷ್ಠಿ ಕರೆದಿದ್ದಕ್ಕೆ ಶಾಲಾ ಅಧಿಕಾರಿಗಳು ಕ್ರಮ ಕೈಗೊಳ್ಳುವ ಸಾಧ್ಯತೆ ಕುರಿತ ಸುದ್ದಿಗಾರರ ಪ್ರಶ್ನೆಗೆ, ತಮ್ಮ ಬೇಡಿಕೆಗಳು ನ್ಯಾಯಯುತವಾಗಿವೆ. ಯಾವುದೇ ಸಮಸ್ಯೆ ಎದುರಾಗುತ್ತದೆ ಎಂದು ನಾವು ನಿರೀಕ್ಷಿಸಿಲ್ಲ ಎಂಬ ದಿಟ್ಟ ಉತ್ತರವನ್ನು ಈ ವಿದ್ಯಾರ್ಥಿಗಳು ನೀಡಿದರು. ಶಾಲೆಯು ತಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ಉಪವಾಸ ಮುಷ್ಕರ ನಡೆಸುವುದಾಗಿಯೂ ಅವರು ಎಚ್ಚರಿಕೆ ನೀಡಿದರು.
ಅಂದ ಹಾಗೆ ಕೆಲವು ಅದೃಷ್ಟಶಾಲಿ ವಿದ್ಯಾರ್ಥಿಗಳೂ ಇದ್ದಾರೆ. ಅವರ ಹೆತ್ತವರು ಶಾಲಾ ಬ್ಯಾಗ್‌ಗಳನ್ನು ತಾವೇ ಹೊತ್ತುಕೊಂಡು ತರಗತಿ ಕೋಣೆಗಳವರೆಗೂ ಹೋಗುತ್ತಾರೆ.
ಈ ವರ್ಷದ ಪೂರ್ವಾರ್ಧದಲ್ಲಿ ಬಾಂಬೆ ಉಚ್ಚ ನ್ಯಾಯಾಲಯದ ನಿರ್ದೇಶದಂತೆ ಸಮಿತಿಯೊಂದರ ಶಿಫಾರಸಿನ ಮೇರೆಗೆ ಮಹಾರಾಷ್ಟ್ರ ಸರಕಾರವು ಶಾಲಾ ಬ್ಯಾಗ್‌ಗಳ ಭಾರವನ್ನು ತಗ್ಗಿಸುವ ಕುರಿತಂತೆ ಮಾರ್ಗಸೂಚಿಯೊಂದನ್ನು ಹೊರಡಿಸಿತ್ತು.







