ಒಡಿಶಾ ಅರಮನೆ ‘ಆತ್ಮಹತ್ಯೆ’ಪ್ರಕರಣ: ಮಾಜಿ ಮ್ಯಾನೇಜರ್‌ನ ಸೋದರ ಆಸ್ಪತ್ರೆಯಲ್ಲಿ ಮೃತ್ಯು

ಭುವನೇಶ್ವರ, ಆ.23: ಅರಮನೆಯ ಮಾಜಿ ವ್ಯವಸ್ಥಾಪಕಿಯ ಇನ್ನೋರ್ವ ಸೋದರ ಇಂದು ಬೆರ್ಹಾಂಪುರ ಆಸ್ಪತ್ರೆಯಲ್ಲಿ ಸಾವನ್ನಪ್ಪುವುದರೊಂದಿಗೆ ಪರ್ಲಖೇಮುಂಡಿ ಅರಮನೆ ‘ಆತ್ಮಹತ್ಯೆ’ಪ್ರಕರಣದಲ್ಲಿ ಸಾವುಗಳ ಸಂಖ್ಯೆ ನಾಲ್ಕಕ್ಕೇರಿದೆ. ಪರ್ಲಖೇಮುಂಡಿಯ ಮನೆಯೊಂದರಲ್ಲಿ ನಿನ್ನೆ ಅರಮನೆಯ ಮಾಜಿ ವ್ಯವಸ್ಥಾಪಕಿ ಅನಂಗಾ ಮಾಂಜರಿ,ಆಕೆಯ ಸೋದರ ಹಾಗೂ ಮಹಾರಾಜ ಗೋಪಿನಾಥ ಗಜಪತಿ ನಾರಾಯಣ ದೇವ್ ಅವರ ಮಾಜಿ ಆಪ್ತ ಸಹಾಯಕ ಸಂಜಯ ಪಾತ್ರಾ ಮತ್ತು ಸೋದರಿ ವಿಜಯಲಕ್ಷ್ಮಿ ಅವರ ಶವಗಳು ಆತ್ಮಹತ್ಯೆ ಮಾಡಿಕೊಂಡಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ಅನಂಗಾರ ಇನ್ನೋರ್ವ ಸೋದರ ಸಂತೋಷ ಪಾತ್ರಾ ಅಲಿಯಾಸ್ ತುಲು ಅವರನ್ನು ಗಂಭೀರ ಸ್ಥಿತಿಯಲ್ಲಿ ಬೆರ್ಹಾಂಪುರದ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೂರು ಆತ್ಮಹತ್ಯಾ ಪತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರಾದರೂ ಸಂತೋಷ ಬದುಕುಳಿದಿದ್ದ ಏಕಮಾತ್ರ ವ್ಯಕ್ತಿಯಾಗಿದ್ದರಿಂದ ಪ್ರಕರಣದ ನಿಗೂಢತೆಯನ್ನು ಭೇದಿಸುವ ನಿಟ್ಟಿನಲ್ಲಿ ಅವರ ಹೇಳಿಕೆ ಮಹತ್ವದ್ದಾಗಿತ್ತು. ಆದರೆ ತನಿಖಾ ತಂಡವು ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಗಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಡಿಜಿಪಿ ಕೆ.ಬಿ.ಸಿಂಗ್ ತಿಳಿಸಿದರು.





