ಬೆಳ್ತಂಗಡಿ: ಕುತ್ಯಡ್ಕ ಗ್ರಾಮ ಅರಣ್ಯ ಸಮಿತಿಯ ವಾರ್ಷಿಕ ಮಹಾಸಭೆ

ಬೆಳ್ತಂಗಡಿ, ಆ.23: ಸರಕಾರದಿಂದ ಪ್ರೋತ್ಸಾಹ ಮತ್ತು ಇನ್ನಿತರ ಸೌಲಭ್ಯಗಳನ್ನು ಗ್ರಾಮ ಅರಣ್ಯ ಸಮಿತಿಯ ಸದಸ್ಯರಿಗೆ ನೀಡುವ ಮೂಲಕ ಪ್ರತೀ ಗ್ರಾಮ ಅರಣ್ಯ ಸಮಿತಿಯ ಸದಸ್ಯರಿಗೂ ಅರಣ್ಯ ಇಲಾಖೆ ಮತ್ತು ಸರಕಾರ ಹತ್ತು ಹಲವು ಯೋಜನೆಗಳನ್ನು ರೂಪಿಸಿ ನೀಡುತ್ತಿದ್ದು ತಮ್ಮ ತಮ್ಮ ಭಾಗದ ಅರಣ್ಯವನ್ನು ರಕ್ಷಿಸಿ ಬೆಳೆಸುವಲ್ಲಿ ಗ್ರಾಮ ಅರಣ್ಯ ಸಮಿತಿ ಸದಸ್ಯರು ಇಲಾಖೆಯೊಂದಿಗೆ ಕೈಜೋಡಿಸಬೇಕೆಂದು ಪುತ್ತೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಚ್. ಸುಂದರ ಶೆಟ್ಟಿ ನುಡಿದರು.
ಅವರು ಬೂಡುಜಾಲು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ನಿಡ್ಲೆ ಗ್ರಾಮದ ಕುತ್ಯಡ್ಕ ಗ್ರಾಮ ಅರಣ್ಯ ಸಮಿತಿಯ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಈ ಗ್ರಾಮ ಅರಣ್ಯ ಸಮಿತಿಯು ಹಲವು ವರ್ಷಗಳ ಹಿಂದೆಯೇ ಅರಣ್ಯದ ಉತ್ತಮ ನಿರ್ವಹಣೆ ಮಾಡುತ್ತಿರುವ ಪ್ರಶಂಸೆಗೆ ಪಾತ್ರವಾಗಿದ್ದು ನಮ್ಮ ಹಿಂದಿನವರು ಬೆಳೆಸಿದ್ದನ್ನು ಮುಂದೆಯೂ ರಕ್ಷಿಸಿ ಉಳಿಸಬೇಕಾದ ಜವಾಬ್ದಾರಿಯನ್ನು ನೂತನವಾಗಿ ರಚನೆಗೊಂಡ ಅರಣ್ಯ ಸಮಿತಿ ನಿರ್ವಹಿಸಬೇಕಾಗಿದೆ ಎಂದರು.
ಕುತ್ಯಡ್ಕ ಗ್ರಾಮ ಅರಣ್ಯ ಸಮಿತಿಯನ್ನು ನೂತನವಾಗಿ ಈ ಸಭೆಯಲ್ಲಿ ರಚಿಸಲಾಯಿತು. ಕಂದಾಯ ನಿರೀಕ್ಷಕ ಪ್ರತೀಶ್ ಚುನಾವಣಾಧಿಕಾರಿಯಾಗಿ ನೂತನ ಗ್ರಾಮ ಅರಣ್ಯ ಸಮಿತಿಯ ಪದಾಧಿಕಾರಿಗಳನ್ನು ಆರಿಸಿದರು.
ನೂತನ ಸಮಿತಿಯ ಅಧ್ಯಕ್ಷರಾಗಿ ನಾರಾಯಣ ಎಂ.ಕೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೃಷ್ಣಪ್ಪ ಗೌಡ, ವಿಠಲ, ಮೋನಪ್ಪ ಗೌಡ, ಹೇಮಾವತಿ ಎಂ.ಕೆ., ಪ್ರೇಮಾ ಭಾಸ್ಕರ್, ಯಮುನಾ, ಶ್ಯಾಮಲಾ, ಚಂದ್ರಶೇಖರ್, ಗೋಪಾಲ ಆಚಾರ್ಯ, ಸರೋಜಿನಿ ಎಂ.ಕೆ. ಇವರನ್ನು ಆಯ್ಕೆ ಮಾಡಲಾಯಿತು.
ನಿಡ್ಲೆ ಗ್ರಾ.ಪಂ. ಅಧ್ಯಕ್ಷೆ ಶುಭಾ ದೇವಧರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕುತ್ಯಡ್ಕ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಎಚ್. ಸೇಸಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿಡ್ಲೆ ಗ್ರಾ.ಪಂ. ಸದಸ್ಯರಾದ ಭದ್ರಯ್ಯ ಗೌಡ, ಸುನಿತಾ, ರಾಮಣ್ಣ ಗೌಡ ನೂಜಿಲ, ಗ್ರಾಮ ಅರಣ್ಯ ಸಮಿತಿಯ ಸದಸ್ಯ ಕಾರ್ಯದರ್ಶಿ, ಉಪ ವಲಯಾರಣ್ಯಾಧಿಕಾರಿ ಲೋಕೇಶ್, ಅರಣ್ಯ ರಕ್ಷಕ ನಿಸಾರ್ ಅಹ್ಮದ್ ಉಪಸ್ಥಿತರಿದ್ದರು.
ಹೇಮಾವತಿ ಸ್ವಾಗತಿಸಿದರು. ಸುಂದರ ಎಂ.ಕೆ. ವಂದಿಸಿದರು. ಕೊರಗಪ್ಪ ಗೌಡ ನಿರೂಪಿಸಿದರು.







