ನೆಹರೂ, ಪಟೇಲ್‌ಗೆ ಗಲ್ಲು : ಹೇಳಿಕೆಯ ಗೊಂದಲಕ್ಕೆ ಜಾವಡೇಕರ್ ಸ್ಪಷ್ಟೀಕರಣ

ಹೊಸದಿಲ್ಲಿ, ಆ.23: ಭಾರತೀಯ ಸ್ವಾತಂತ್ರ ಹೋರಾಟದ ಅಗ್ರಗಣ್ಯರನ್ನು ಬ್ರಿಟಿಷರು ಹೇಗೆ ನಡೆಸಿಕೊಂಡರೆಂಬ ಕುರಿತು ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ನೀಡಿದ ಹೇಳಿಕೆಯೊಂದು ಇಂದು ವಿವಾದ ಅಲೆಯೆಬ್ಬಿಸಿದ್ದು, ಅದಕ್ಕವರು ಅನಿವಾರ್ಯವಾಗಿ ಸ್ಪಷ್ಟೀಕರಣ ನೀಡಿ ಶಾಂತಗೊಳಿಸಬೇಕಾಗಿ ಬಂದಿದೆ.
ಮಧ್ಯಪ್ರದೇಶದ ಛಿಂದ್ರಾರದಲ್ಲಿ ಅವರು ನೀಡಿದ್ದ ಹೇಳಿಕೆಯೊಂದರ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಸುತ್ತು ಹೊಡೆಯುತ್ತಿದ್ದು, ಅದರಲ್ಲಿ ಅವರು, ‘‘ಸುಭಾಶ್ಚಂದ್ರ ಬೋಸ್, ಸರ್ದಾರ್ ಪಟೇಲ್, ಪಂಡಿತ್ ನೆಹರೂ, ಭಗತ್‌ಸಿಂಗ್, ರಾಜಗುರು ಸಭೀ ಫಾಂಸಿ ಪರ್ ಚಢೇ(ಎಲ್ಲರೂ ಗಲ್ಲುಗಂಬವೇರಿದರು)’’ ಎಂದಿರುವುದು ಕೇಳಿಸುತ್ತಿದೆ.
ಜಾವಡೇಕರ್‌ನ ಈ ಹೇಳಿಕೆ, ಭಗತ್‌ಸಿಂಗ್ ಹಾಗೂ ರಾಜಗುರು ಅವರಂತೆ ನೆಹರೂ ಹಾಗೂ ಪಟೇಲರನ್ನೂ ಬ್ರಿಟಿಷರು ಗಲ್ಲಿಗೇರಿಸಿದರೆಂಬ ಭಾವನೆ ಮೂಡಿಸುವಂತಿತ್ತು.
ಸರಣಿ ಟ್ವೀಟ್‌ಗಳಲ್ಲಿ ಈ ಕುರಿತು ಸ್ಪಷ್ಟೀಕರಣ ನೀಡಿರುವ ಜಾವಡೇಕರ್, ವರದಿಗಳಿಂದ ತನಗೆ ಅಚ್ಚರಿಯಾಗಿದೆ. ತಾನೂ 1857ರ ಬಳಿಕ ಎಲ್ಲ ಸ್ವಾತಂತ್ರ ಹೋರಾಟಗಾರರಿಗೆ ಗೌರವ ನೀಡಿದ್ದೆ. ತಾನು ಗಾಂಧಿ, ನೆಹರೂ, ಸುಭಾಶ್ಚಂದ್ರ ಬೋಸರಂತಹ ನಾಯಕರನ್ನು ಉಲ್ಲೇಖಿಸಿದ್ದೆ. ಆದರೆ, ಆ ಬಳಿಕ ಒಂದು ಪೂರ್ಣವಿರಾಮವಿತ್ತು. ಮುಂದಿನ ವಾಕ್ಯದಲ್ಲಿ ಬ್ರಿಟಿಷರಿಂದ ನೇಣಿಗೇರಿಸಲ್ಪಟ್ಟ, ಕಾರಾಗೃಹಕ್ಕೆ ದೂಡಲ್ಪಟ್ಟ ಹಾಗೂ ಸಂಕಷ್ಟಕ್ಕೊಳಗಾಗಿದ್ದವರನ್‌ಉ ನೆನಪಿಸಿದ್ದೇನೆಂದು ತಿಳಿಸಿದ್ದಾರೆ.
ತನ್ನ ಮಾತನ್ನು ಆಲಿಸಿದವರ ಮನದಲ್ಲಿ ಈ ಕುರಿತು ಯಾವುದೇ ಗೊಂದಲವಿಲ್ಲ. ಇಂದು ಎಲ್ಲ ಗೊಂದಲ ನಿವಾರಿಸುವುದೆಂದು ತಾನು ಆಶಿಸುತ್ತೇನೆಂದು ಅವರು ಹೇಳಿದ್ದಾರೆ.





