ಆಮ್ನೆಸ್ಟಿಯ ಅಭಿವ್ಯಕ್ತಿ ಸ್ವಾತಂತ್ರವನ್ನು ಗೌರವಿಸುತ್ತೇವೆ: ಅಮೆರಿಕ

ವಾಶಿಂಗ್ಟನ್, ಆ.23: ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾರತ ವಿರೋಧಿ ಘೋಷಣೆ ಕೂಗಿದ ವಿಚಾರದಲ್ಲಿ ಆಮ್ನೆಸ್ಟಿ ಇಂಟರ್ನ್ಯಾಶನಲ್ ವಿರುದ್ಧ ದೇಶದ್ರೋಹದ ಆರೋಪ ಹೊರಿಸಿರುವ ಕುರಿತು ಪ್ರತಿಕ್ರಿಯೆ ನೀಡಲು ಅಮೆರಿಕ ಹಿಂಜರಿದಿದೆ. ಆದಾಗ್ಯೂ, ಜಾಗತಿಕ ಹಕ್ಕುಗಳ ಕಾವಲುನಾಯಿಯ ಅಭಿವ್ಯಕ್ತಿ ಸ್ವಾತಂತ್ರವನ್ನು ತಾನು ಗೌರವಿಸುತ್ತೇನೆಂದು ಅದು ಹೇಳಿದೆ.
ಸಾಮಾನ್ಯವಾಗಿ ಪ್ರಪಂಚದೆಲ್ಲೆಡೆ ತಾವು ಮಾಡುತ್ತಿರುವಂತೆಯೇ, ಅಭಿವ್ಯಕ್ತಿ ಸ್ವಾತಂತ್ರ ಹಾಗೂ ನಾಗರಿಕ ಸಮಾಜದ ಮೂಲಕ ಸೇರಿದಂತೆ, ಸಭೆ ನಡೆಸುವ ಹಕ್ಕುಗಳನ್ನು ತಾವು ಬೆಂಬಲಿಸುತ್ತೇವೆಂದು ರಾಜ್ಯಾಂಗ ಇಲಾಖೆಯ ಉಪ ವಕ್ತಾರ ಮಾರ್ಕ್ ಟೋನರ್ ಪತ್ರಕರ್ತರಿಗೆ ತಿಳಿಸಿದ್ದಾರೆ.
ಆಮ್ನೆಸ್ಟಿ ಇಂಟರ್ನ್ಯಾಶನಲ್ ವಿರುದ್ಧದ ದೇಶದ್ರೋಹ ಆರೋಪದ ಬಗ್ಗೆ ಬೆಂಗಳೂರಿನ ಸ್ಥಳೀಯ ಪೊಲೀಸರು ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆಂಬ ವರದಿಗಳನ್ನು ತಾವು ನೋಡಿದ್ದೇವೆ. ತನಿಖೆಯ ಬಗ್ಗೆ ಹೆಚ್ಚಿನ ವಿವರಕ್ಕಾಗಿ ಬೆಂಗಳೂರಿನ ಪೊಲೀಸರನ್ನೇ ವಿಚಾರಿಸುವಂತೆ ಸೂಚಿಸುತ್ತಿದ್ದೇನೆ. ಆದರೆ ತಾನು ಈಗಾಗಲೇ ಹೇಳಿರುವಂತೆ ಆಮ್ನೆಸ್ಟಿ ಹಾಗೂ ಇತರರ ಅಭಿವ್ಯಕ್ತಿ ಸ್ವಾತಂತ್ರವನ್ನು ತಾವು ಗೌರವಿಸುತ್ತೇವೆಂದು ಅವರು ಹೇಳಿದ್ದಾರೆ.





