ಬ್ರೇಕ್ ವೈಫಲ್ಯದಿಂದ ಲಾರಿ ಪಲ್ಟಿ: ನೂರಾರು ವಿದ್ಯಾರ್ಥಿಗಳ ಪ್ರಾಣ ಉಳಿಸಿದ ಚಾಲಕ, ಕ್ಲೀನರ್

ಬಂಟ್ವಾಳ, ಆ. 23: ಬ್ರೇಕ್ ವೈಪಲ್ಯದಿಂದ ಲಾರಿಯೊಂದು ಚಾಲಕನ ನಿಯಂತ್ರಣಕ್ಕೆ ಸಿಗದೆ ಉರುಳಿಬಿದ್ದ ಘಟನೆ ಬಂಟ್ವಾಳದ ಎಸ್‌ವಿಎಸ್ ಕಾಲೇಜು ಬಳಿ ಮಂಗಳವಾರ ಸಂಜೆ ನಡೆದಿದೆ.
ಘಟನೆಯಲ್ಲಿ ಲಾರಿ ಚಾಲಕ ಅಭಿಲಾಷ್(40) ಗಂಭೀರ ಗಾಯಗೊಂಡಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ಲೀನರ್ ಮನ್ಸೂರ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾನೆ.
ಲೊರೆಟ್ಟೋ ಕಡೆಯಿಂದ ಕೋಳಿ ಗೊಬ್ಬರ ಹೇರಿಕೊಂಡು ಬರುತ್ತಿದ್ದ ಲಾರಿ ಎಸ್‌ವಿಎಸ್ ಕಾಲೇಜು ಬಳಿಯ ಇಳಿಜಾರು ರಸ್ತೆಯಲ್ಲಿ ಬ್ರೇಕ್ ವೈಫಲ್ಯದಿಂದ ಚಾಲಕನ ನಿಯಂತ್ರಣ ತಪ್ಪಿದೆ. ಇದೇ ವೇಳೆ ಕಾಲೇಜಿನ ಅನೇಕ ವಿದ್ಯಾರ್ಥಿಗಳು ಬಸ್ಸಿಗಾಗಿ ರಸ್ತೆ ಬದಿ ಕಾಯುತ್ತಿದ್ದರು. ಮುಂದಾಗಬಹುದಾದ ಅನಾಹುತದ ಬಗ್ಗೆ ಎಚ್ಚರವಹಿಸಿಕೊಂಡ ಲಾರಿ ಚಾಲಕ ಹಾಗೂ ಕ್ಲೀನರ್ ದೂರದಿಂದಲೇ ಲಾರಿ ಬ್ರೇಕ್‌ಫೇಲ್ ಆಗಿದೆಯೆಂದು ಬೊಬ್ಬೆ ಹೊಡೆಯುತ್ತಾ ವಿದ್ಯಾರ್ಥಿಗಳನ್ನು ದೂರ ಹೋಗುವಂತೆ ತಿಳಿಸಿದ್ದ. ತಕ್ಷಣ ರಸ್ತೆ ಬದಿ ಬಸ್ಸು ಕಾಯುತ್ತಿದ್ದ ವಿದಾರ್ಥಿಗಳು ದೂರ ಓಡಿ ಪ್ರಾಣ ರಕ್ಷಿಸಿಕೊಂಡಿದ್ದಾರೆ. ಕೆಲ ಕ್ಷಣದಲ್ಲೇ ರಸ್ತೆ ಬದಿಯ ಧರೆಗೆ ಡಿಕ್ಕಿ ಹೊಡೆದು ಲಾರಿ ಪಲ್ಟಿ ಹೊಡೆದಿದೆ. ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.





