ಕಾಶ್ಮೀರ-ಬಲೂಚಿಸ್ತಾನ ಸಮಸ್ಯೆಯನ್ನು ಒಳಗೊಂಡಿರುವ ಎರಡು ಪಕ್ಷಗಳೇ ಪರಿಹರಿಸಬೇಕು: ಅಮೆರಿಕನ್ ರಾಯಭಾರಿ
ಹೊಸದಿಲ್ಲಿ, ಆ.23: ಕಾಶ್ಮೀರ ಅಥವಾ ಬಲೂಚಿಸ್ಥಾನಕ್ಕೆ ಸಂಬಂಧಿಸಿದ ವಿವಾದದ ಕುರಿತು ‘ಸಂಬಂಧಿಸಿದ ಎರಡು ಪಕ್ಷಗಳೇ’ ನಿರ್ಧರಿಸಬೇಕೆಂದು ಅಮೇರಿಕವಿಂದು ಅಭಿಪ್ರಾಯಿಸಿದೆ.
ಬಲೂಚಿಸ್ತಾನ ಅಥವಾ ನಿಖರವಾಗಿ ಕಾಶ್ಮೀರದಲ್ಲಿ ಹೆಚ್ಚಿರುವ ಉದ್ವಿಗ್ನತೆಯ ಕುರಿತಾಗಿಯೂ ಹೇಳುವುದಾದರೆ, ವಿಷಯವನ್ನು ಎರಡೂ ಪಕ್ಷಗಳ ನಿರ್ಧಾರಕ್ಕೆ ಬಿಡಿ ಎಂಬುದು ತಮ್ಮ ಸುದೀರ್ಘ ಕಾಲದ ನೀತಿಯಾಗಿದೆಯೆಂದು ‘ಕ್ವಿಂಟ್’ ನ್ಯೂಸ್ ವೆಬ್‌ಸೈಟ್‌ಗೆ ನೀಡಿರುವ ಸಂದರ್ಶನವೊಂದರಲ್ಲಿ ಅಮೆರಿಕನ್ ರಾಯಭಾರಿ ರಿಚಾರ್ಡ್ ವರ್ಮ ಹೇಳಿದ್ದಾರೆನ್ನಲಾಗಿದೆ.
ಪಾಕಿಸ್ತಾನದಲ್ಲಿ ಹುಟ್ಟಿ ಭಾರತದತ್ತ ಗುರಿಯಿರಿಸುವ ಭಯೋತ್ಪಾದನೆಯ ಬಗ್ಗೆ ಅಮೆರಿಕ ಕಳವಳವನ್ನೇಕೆ ಎತ್ತುತ್ತಿಲ್ಲ ಎಂಬ ಪ್ರಶ್ನೆಗೆ, ಅದನ್ನು ತಾನು ಒಪ್ಪುವುದಿಲ್ಲ ಎಂದಿದ್ದಾರೆ.
ನಿರ್ದಿಷ್ಟವಾಗಿ ಕಳೆದ 15 ವರ್ಷಗಳಲ್ಲಿ, ಬೇರೆ ಬೇರೆ ಆಡಳಿತಗಳಲ್ಲಿ ಅಮೆರಿಕವು, ಅವರೆಲ್ಲೇ ಇರಲಿ... ಎಲ್ಟಿಟಿಇ ಸಹಿತ ಭಯೋತ್ಪಾದಕರ ಬೆನ್ನು ಬಿದ್ದಿತ್ತು. ತಮ್ಮ ಬದ್ಧತೆಯಲ್ಲಿ ಯಾವುದೇ ಸಂಶಯವಿದೆಯೆಂದು ತನಗನಿಸುವುದಿಲ್ಲ ಎಂದು ವರ್ಮ ಹೇಳಿದ್ದಾರೆ.
ಭಯೋತ್ಪಾದನಾ ವಿರೋಧಿ ಸಮರ ಒಂದು ‘ಅಗಾಧ ವಿಷಯ’ ಎಂದ ಅವರು, ಭಾರತದಂತೆಯೇ ಅಮೆರಿಕವೂ ಭಯೋತ್ಪಾದನೆಯಿಂದ ಸಂತ್ರಸ್ತವಾಗಿದೆ. 9/11ರ ಭಯೋತ್ಪಾದಕ ದಾಳಿಯ ಬಳಿಕ ಅಮೆರಿಕವು ಭಯೋತ್ಪಾದನೆ ನಿಗ್ರಹಕ್ಕೆ ಅವಿರತವಾಗಿ ಶ್ರಮಿಸುತ್ತಿವೆಯೆಂದು ಅವರು ತಿಳಿಸಿದ್ದಾರೆ.
ಭಾರತಕ್ಕೆ ಎನ್‌ಎಸ್‌ಜಿ ಸದಸ್ಯತ್ವವನ್ನು ತಡೆಯುವ ಚೀನದ ಪ್ರಯತ್ನವನ್ನು ಅಮೆರಿಕ ಹೇಗೆ ನಿಭಾಯಿಸಲಿದೆಯೆಂಬ ಪ್ರಶ್ನೆಗೆ, ಇದೊಂದು ಕಠಿಣ ಪರಿಶ್ರಮದ ರಾಜತಾಂತ್ರಿಕತೆಯಾಗಿದ್ದು, ಅಮೆರಿಕ ಅದನ್ನು ಸಾಧಿಸಬಲ್ಲುದೆಂದು ವರ್ಮ ಉತ್ತರಿಸಿದ್ದಾರೆ.





