ಪತ್ನಿಯ ತಲೆಗೆ ಕತ್ತಿಯಿಂದ ಕಡಿದು ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಪುತ್ತೂರು, ಆ.23: ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಕರ್ನೂರು ಸಮೀಪದ ಮೈರೋಳು ಎಂಬಲ್ಲಿ ಮೂರು ವಾರಗಳ ಹಿಂದೆ ತನ್ನ ಪತ್ನಿಯ ತಲೆಗೆ ಕತ್ತಿಯಿಂದ ಕಡಿದು ಪರಾರಿಯಾಗಿದ್ದ ಆರೋಪಿಯನ್ನು ಈಶ್ವರಮಂಗಲ ಹೊರ ಠಾಣೆಯ ಪೊಲೀಸರು ಸೋಮವಾರ ಸುಳ್ಯ ತಾಲೂಕಿನ ಅಜ್ಜಾವರ ಎಂಬಲ್ಲಿ ಬಂಧಿಸಿದ್ದಾರೆ.
ನೆಟ್ಟಣಿಗೆ ಮುಡ್ನೂರು ಗ್ರಾಮದ ಕರ್ನೂರು ಸಮೀಪದ ಮೈರೋಳು ನಿವಾಸಿ ಕುಶಲ ಬಂಧಿತ ಆರೋಪಿ.
ಆರೋಪಿಯು ತನ್ನ ಪತ್ನಿ ಜಾನಕಿ ಎಂಬವರ ತಲೆಗೆ ಕತ್ತಿಯಿಂದ ಕಡಿದು ಬಳಿಕ ತಲೆಮರೆಸಿಕೊಂಡಿದ್ದ. ಮದ್ಯ ಸೇವಿಸಿ ಮನೆಗೆ ಬಂದು ಪ್ರತಿದಿನ ತನ್ನ ಪತ್ನಿ ಮತ್ತು ಮಕ್ಕಳ ಜೊತೆ ಜಗಳವಾಡುತ್ತಿದ್ದ ಕುಶಲ, ಆಗಸ್ಟ್ 2ರಂದು ರಾತ್ರಿ ಪತ್ನಿ ಜಾನಕಿ ಅವರು ಮಕ್ಕಳಿಗೆ ಊಟ ಬಡಿಸುತ್ತಿದ್ದ ವೇಳೆ ಆಕೆಯನ್ನು ಬೈಯಲಾರಂಭಿಸಿದ್ದ. ಆ ವೇಳೆ ಕಿರಿಯ ಪುತ್ರ ಕೃಷ್ಣಪ್ಪ ಎಂಬಾತ ಬೈಯುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ. ಇದರಿಂದಾಗಿ ಕ್ರೋಧಗೊಂಡ ಕುಶಲ ಕತ್ತಿಯಿಂದ ಕೃಷ್ಣಪ್ಪನಿಗೆ ಕಡಿಯಲು ಮುಂದಾಗಿದ್ದ. ಆ ವೇಳೆ ಹಲ್ಲೆ ತಡೆಯಲು ಹೋದ ಜಾನಕಿ ಅವರ ತಲೆಗೆ ಕತ್ತಿಯೇಟು ಬಿದ್ದಿತ್ತು. ಕಡಿದ ರಭಸಕ್ಕೆ ಕತ್ತಿಯೇ ಎರಡು ತುಂಡಾಗಿ ಒಂದು ತುಂಡು ಜಾನಕಿಯವರ ತಲೆಯ ಗಾಯದಲ್ಲೇ ಉಳಿದುಕೊಂಡಿತ್ತು.
ಘಟನೆಯ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯು ಸುಳ್ಯ ತಾಲೂಕಿನ ಅಜ್ಜಾವರ ಎಂಬಲ್ಲಿರುವ ಕುರಿತು ದೊರೆತ ಖಚಿತ ಮಾಹಿತಿಯ ಮೇರೆಗೆ ಸಂಪ್ಯ ಠಾಣಾ ಎಸ್ಸೈ ಅಬ್ದುಲ್ ಖಾದರ್ ಅವರ ನಿರ್ದೇಶನದಲ್ಲಿ ಈಶ್ವರಮಂಗಲ ಹೊಟ ರಾಣೆಯ ಎಎಸ್ಸೈ ವಿಠಲ ಶೆಟ್ಟಿ ಮತ್ತು ಸಿಬ್ಬಂದಿ ಹನುಮಂತ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.





