ಮದರ್ ತೆರೆಸಾಗೆ ಸಂತಪದವಿ ಪ್ರದಾನ ಪ್ರಯುಕ್ತ ವಿಶೇಷ ಅಂಚೆ ಲಕೋಟೆ,ನಾಣ್ಯ ಮತ್ತು ಪ್ರತಿಮೆ

ಕೋಲ್ಕತಾ,ಆ.23: ಮದರ್ ತೆರೆಸಾ ಅವರಿಗೆ ಸಂತ ಪದವಿ ಪ್ರದಾನ ಸಮಾರಂಭವು ಸೆ.4ರಂದು ವ್ಯಾಟಿಕನ್‌ನಲ್ಲಿ ನಡೆಯಲಿದ್ದು, ಈ ಸಂದರ್ಭದಲ್ಲಿ ವಿಶೇಷ ಅಂಚೆ ಲಕೋಟೆ ಮತ್ತು ನಾಣ್ಯಗಳ ಬಿಡುಗಡೆಯ ಜೊತೆಗೆ ವಿಗ್ರಹವೊಂದನ್ನು ಸ್ಥಾಪಿಸಲಾಗುವುದು.
ಭಾರತೀಯ ಅಂಚೆ ಇಲಾಖೆಯು ಶುದ್ಧರೇಷ್ಮೆಯಿಂದ ತಯಾರಿಸಲಾದ ಮದರ್ ತೆರೆಸಾ ಅವರ ವಿಶೇಷ ಲಕೋಟೆ ಮತ್ತು ನಾಣ್ಯವನ್ನು ಕೆತ್ತಲಾದ ಲಕೋಟೆಯನ್ನು ಸೆ.2ರಂದು ಬಿಡುಗಡೆಗೊಳಿಸಲಿದೆ.
2010ರಲ್ಲಿ ತೆರೆಸಾ ಅವರ ಜನ್ಮ ಶತಾಬ್ದಿ ಆಚರಣೆಗಳ ಸ್ಮರಣಾರ್ಥ ಭಾರತ ಸರಕಾರವು ಹೊರಡಿಸಿದ್ದ ಐದು ರೂ.ಗಳ ಸ್ಮಾರಕ ನಾಣ್ಯವನ್ನು ಲಕೋಟೆಯ ಮೇಲೆ ಕೆತ್ತಲಾಗುವುದು. ಇದು ಸಂಗ್ರಹಯೋಗ್ಯ ನಾಟ್ಯ ಮತ್ತು ಅಂಚೆಚೀಟಿಗಳ ವಿಶೇಷ ಲಕ್ಷಣಗಳೊಂದಿಗೆ ಬಿಡುಗಡೆಯಾಗಲಿದೆ ಎಂದು ಅಂಚೆಚೀಟಿಗಳನ್ನು ವಿನ್ಯಾಸಗೊಳಿಸಿರುವ ಖ್ಯಾತ ಅಂಚೆಚೀಟಿ ಸಂಗ್ರಹಕಾರ ಅಲೋಕ್ ಕೆ.ಗೋಯಲ್ ತಿಳಿಸಿದರು. ಇಂತಹ 1000 ಲಕೋಟೆಗಳನ್ನು ಮಾತ್ರ ಬಿಡುಗಡೆಗೊಳಿಸಲಾಗುತ್ತದೆ.
ಅತ್ತ ತೆರೆಸಾ 1910ರಲ್ಲಿ ಜನ್ಮ ತಾಳಿದ್ದ ರಿಪಬ್ಲಿಕ್ ಆಫ್ ಮೆಸೆಡೋನಿಯಾ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆಯ ಸ್ಮರಣಾರ್ಥ ವಿಶೇಷ ಚಿನ್ನದ ಲೇಪನದ ಬೆಳ್ಳಿಯ ನಾಣ್ಯಗಳನ್ನು ಬಿಡುಗಡೆಗೊಳಿಸುವುದಾಗಿ ಪ್ರಕಟಿಸಿದೆ. 100 ಮೆಸೆಡೋನಿಯನ್ ದಿನಾರ್ ಮುಖಬೆಲೆಯ ಈ ನಾಣ್ಯಗಳು ಮುಂದಿನ ತಿಂಗಳು ಬಿಡುಗಡೆಗೊಳ್ಳಲಿವೆ.
ಸೆ.2ರಂದು ಮದರ್ ತೆರೆಸಾ ಅವರ ಕಂಚಿನ ಪ್ರತಿಮೆಯೊಂದನ್ನು ಅವರು ದೀನದಲಿತರ ಸೇವೆಯಲ್ಲಿ ತನ್ನ ಜೀವಮಾನವನ್ನು ಕಳೆದ ಕೋಲ್ಕತಾದ ಬಿಷಪ್ ಹೌಸ್‌ನಲ್ಲಿ ಪೋಪ್ ಜಾನ್ ಪಾಲ್-2 ಅವರ ಪ್ರತಿಮೆಯ ಬಳಿ ಸ್ಥಾಪಿಸಲಾಗುವುದು. ಇಟಲಿಯಿಂದ ಆಮದು ಮಾಡಲಾದ ಕಂಚಿನಿಂದ ಈ ಪ್ರತಿಮೆಯನ್ನು ತಯಾರಿಸಲಾಗಿದೆ.





