ರಾತ್ರಿ ವೇಳೆ ಅಪಘಾತಗಳನ್ನು ತಪ್ಪಿಸಲು ಬಿಡಾಡಿ ಜಾನುವಾರುಗಳ ಕೊಂಬುಗಳಿಗೆ ಹೊಳೆಯುವ ಸ್ಟಿಕರ್

ಭೋಪಾಲ,ಆ.23: ರಾತ್ರಿ ವೇಳೆ ರಸ್ತೆಗಳಲ್ಲಿ ತಿರುಗಾಡುವ ಬಿಡಾಡಿ ಜಾನುವಾರುಗಳಿಂದಾಗಿ ವಾಹನ ಚಾಲಕರು ಅಪಘಾತಗಳಿಗೆ ಗುರಿಯಾಗುವುದನ್ನು ತಪ್ಪಿಸಲು ಮಧ್ಯಪ್ರದೇಶ ಪೊಲೀಸರು ಅವುಗಳ ಕೊಂಬುಗಳಿಗೆ ರಾತ್ರಿ ವೇಳೆ ಹೊಳೆಯುವ ಸ್ಟಿಕರ್‌ಗಳನ್ನು ಅಂಟಿಸುತ್ತಿದ್ದಾರೆ.
ಬಾಲಾಘಾಟ್ ಜಿಲ್ಲೆಯಲ್ಲಿ ಸರಣಿ ಅಪಘಾತಗಳ ಬಳಿಕ ವಾಹನಗಳ ಚಾಲಕರು ರಾತ್ರಿ ವೇಳೆ ರಸ್ತೆಗಡ್ಡವಾಗಿ ಬರುವ ಜಾನುವಾರುಗಳನ್ನು ಗುರುತಿಸಲು ಸಾಧ್ಯವಾಗುವಂತೆ ಪೊಲೀಸರು ಸುಮಾರು 300 ದನಗಳು ಮತ್ತು ಹೋರಿಗಳ ಕೊಂಬುಗಳಿಗೆ ಕಿತ್ತಳೆ ಬಣ್ಣದ ರೇಡಿಯಂ ಪ್ರತಿಫಲನ ಸ್ಟಿಕರ್‌ಗಳನ್ನು ಅಂಟಿಸಿದ್ದಾರೆ.
ದೇಶಾದ್ಯಂತ ರಾತ್ರಿ ವೇಳೆ ರಸ್ತೆಗಳಲ್ಲಿ ಅಡ್ಡಾಡುವ ಬಿಡಾಡಿ ಜಾನುವಾರುಗಳಿಂದಾಗಿ ಹಲವಾರು ಅಪಘಾತಗಳು ಸಂಭವಿಸಿವೆ. ಬಹಳಷ್ಟು ಚಾಲಕರು ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂದು ಬಾಲಾಘಾಟ್‌ನ ಸಂಚಾರ ಪೊಲೀಸ್ ಇನ್‌ಸ್ಪೆಕ್ಟರ್ ಕೈಲಾಸ್ ಚೌಹಾಣ್ ಸುದ್ದಿಸಂಸ್ಥೆಗೆ ತಿಳಿಸಿದರು.
ರಸ್ತೆ ಸಾರಿಗೆ ಸಚಿವಾಲಯದ ಅಂಕಿಅಂಶಗಳಂತೆ 2015ರಲ್ಲಿ 550ಕ್ಕೂ ಅಧಿಕ ಜನರು ಜಾನುವಾರುಗಳ ಕಾರಣದಿಂದ ಸಂಭವಿಸಿದ ಅಪಘಾತಗಳಿಗೆ ಬಲಿಯಾಗಿದ್ದಾರೆ.







