ದೇಶದ ವಿಚಾರದಲ್ಲಿ ರಾಜಕೀಯ ಸಲ್ಲದು: ಚಂದ್ರೇಶ್
‘ಆಝಾದಿ-70 ಯಾದ್ ಕರೋ ಕುರ್ಬಾನಿ’
 mdg news 2.jpg)
ಮೂಡಿಗೆರೆ, ಆ.23: ಯಾವುದೇ ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ದೇಶದ ವಿಚಾರದಲ್ಲಿ ರಾಜಕೀಯ ಮಾಡಬಾರದು. ಹಾಗೆ ಮಾಡಿದರೆ ದೇಶ ಬಡವಾಗುವುದರಲ್ಲಿ ಸಂಶಯವಿಲ್ಲ ಎಂದು ಮಾಜಿ ಸೈನಿಕ ಚಂದ್ರೇಶ್ ಹೇಳಿದರು.
ವಿ.ಎಸ್.ಶಾಲೆ, ತಾಲೂಕು ಪತ್ರಕರ್ತರ ಸಂಘ, ಮಾಜಿ ಸೈನಿಕರ ಸಂಘ ಹಾಗೂ ಟೈಲರ್ಸ್ ಸಂಘಗಳ ಸಂಯುಕ್ತಾಶ್ರಯದಲ್ಲಿ ಮೂಡಿಗೆರೆ ಪಟ್ಟಣದ ಲಯನ್ಸ್ ವೃತ್ತದಲ್ಲಿ ನಡೆಸಿದ ‘ಆಝಾದಿ-70 ಯಾದ್ ಕರೋ ಕುರ್ಬಾನಿ’ (ಹುತಾತ್ಮರನ್ನು ಸ್ಮರಿಸೋಣ) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶ ಪ್ರೇಮ ಎಂಬ ಹೆಸರಿನಲ್ಲಿ ರಾಜಕೀಯ ಪಕ್ಷಗಳು ರಾಜಕೀಯ ಮಾಡುವುದನ್ನು ಮೊದಲು ಬಿಡಬೇಕು. ದೇಶದ ಗಡಿ ಪ್ರದೇಶಗಳಲ್ಲಿ ದೇಶ ಕಾಯುವ ನಮ್ಮ ಸೈನಿಕರು ಆಹಾರವಿಲ್ಲದೆ, ಆಮ್ಲಜನಕ ಸೇರಿದಂತೆ ಅನೇಕ ಸಮಸ್ಯೆಗಳ ಕೊರತೆಯಿಂದಲೇ ದೇಶ ಕಾಯುವ ಕೆಲಸ ಮಾಡುತ್ತಾರೆ. ಇದನ್ನು ಮೊದಲು ರಾಜಕೀಯ ಪಕ್ಷಗಳು ಅರಿತುಕೊಳ್ಳಬೇಕಿದೆ. ಪ್ರತಿಯೊಬ್ಬರೂ ಸೈನಿಕರಾಗಲು ಸಾಧ್ಯವಿಲ್ಲ. ದೇಶದ ಮೇಲೆ ನಿಜವಾಗಿಯೂ ಪ್ರೀತಿ ಇದ್ದರೆ ಅವರವರು ಮಾಡುವ ಕೆಲಸಗಳಲ್ಲಿ ದೇಶ ಭಕ್ತಿ ಇದ್ದರೆ ಸಾಕು ಎಂದರು. ಪತ್ರಕರ್ತ ಪ್ರಸನ್ನ ಗೌಡಹಳ್ಳಿ ಮಾತನಾಡಿ, ಸ್ವಾತಂತ್ರ ಸಂಗ್ರಾಮಗಳಲ್ಲಿ ವಿವಿಧ ರೀತಿಯ ಹೋರಾಟಗಳು ನಡೆದಿವೆ. ಇದರಲ್ಲಿ ನೂರಾರು ಸೈನಿಕರು, ಯೋಧರು ಬಲಿಯಾಗಿದ್ದಾರೆ. ನಮ್ಮ ಹಿರಿಯರು ದೇಶಕ್ಕೆ ಸ್ವಾತಂತ್ರ ತಂದು ಕೊಟ್ಟ ಮೇಲೆ ಈ ದೇಶದ ಭದ್ರತೆಗಾಗಿ ಗಡಿ ತೀರದಲ್ಲಿ ಇಂದಿಗೂ ದೇಶ ಕಾಯುತ್ತಿರುವ ಸೈನಿಕರಿಗೆ ಬೆಂಬಲ ನೀಡುವುದು ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ ಎಂದು ಹೇಳಿದರು. ಪತ್ರಕರ್ತ ವಾಸುದೇವ್ ಮಾತನಾಡಿದರು. ಆರಂಭದಲ್ಲಿ ವಿ.ಎಸ್.ಶಾಲೆ, ತಾಲೂಕು ಪತ್ರಕರ್ತರ ಸಂಘ, ಮಾಜಿ ಸೈನಿಕರ ಸಂಘ ಹಾಗೂ ಟೈಲರ್ಸ್ ಸಂಘವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿತು. ಬಳಿಕ ಲಯನ್ಸ್ ವೃತ್ತದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಈ ವೇಳೆ ವಿ.ಎಸ್. ಶಾಲೆ ವಿದ್ಯಾರ್ಥಿಗಳು ದೇಶದ ಬಗ್ಗೆ ರೋಮಾಂಚಕವಾದ ನೃತ್ಯ ಪ್ರದರ್ಶನ ನಡೆಸಿದರು.
ಈ ಸಂದರ್ಭದಲ್ಲಿ ಮಾಜಿ ಸೈನಿಕರಾದ ಉಮೇಶ್ ಮುಗ್ರಹಳ್ಳಿ, ರಾಜಶೇಖರ್ ಕೆಲ್ಲೂರು, ಪೂರ್ಣೇಶ್ ದಾರದಹಳ್ಳಿ, ರತೀಶ್ ಪಟದೂರು, ಶ್ರೀನಿವಾಸ್ ಮುತ್ತಿಗೆಪುರ, ವಿ.ಎಸ್. ಶಾಲೆಯ ಆಡಳಿತಾಧಿಕಾರಿ ವಿಶ್ವನಾಥ್ ರೈ, ಪ್ರಾಂಶುಪಾಲೆ ಬಿ.ಉಷಾ, ಟೈಲರ್ಸ್ ಸಂಘದ ಅಧ್ಯಕ್ಷ ರವಿ ಹಾಗೂ ಸದಸ್ಯರು, ವಿ.ಎಸ್. ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





