ಕಾನೂನು ಅರಿವು ಮೂಡಿಸಲು ನ್ಯಾಯಾಧೀಶರ ಕರೆ
ಕಾನೂನು ಸೇವಾ ಪ್ರಾಧಿಕಾರದ ದ್ವೈಮಾಸಿಕ ಸಭೆ

ಮಡಿಕೇರಿ, ಆ.23: ಜಿಲ್ಲೆಯಾದ್ಯಂತ ಪ್ರತೀ ನಗರ, ಹಳ್ಳಿ, ಹಾಡಿ, ಶಾಲಾ-ಕಾಲೇಜುಗಳಲ್ಲಿ ಕಾನೂನಿನ ಬಗೆಗಿನ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಪಂದಿಸಬೇಕೆಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಾಸ್ಟರ್ ಆರ್.ಕೆ.ಜಿ.ಎಂ.ಎಂ ಮಹಾಸ್ವಾಮೀಜಿ ಕರೆ ನೀಡಿದ್ದಾರೆ.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ದ್ವೈಮಾಸಿಕ ಸಭೆೆಯು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ಮಾಸ್ಟರ್ ಆರ್.ಕೆ.ಜಿ.ಎಂ.ಎಂ.ಮಹಾಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯು ಬೆಟ್ಟಗುಡ್ಡಗಳಿಂದ ಕೂಡಿದ ಪ್ರದೇಶವಾಗಿದೆ. ಜಿಲ್ಲೆಯ ಪ್ರತೀ ಗ್ರಾಮ, ಪಟ್ಟಣ ಹಾಗೂ ಹಾಡಿಗಳಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸುವಲ್ಲಿ ಕಾನೂನು ಅರಿವು ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಈ ಬಗ್ಗೆ ಇಲಾಖೆ ಅಧಿಕಾರಿಗಳು ಕಾರ್ಯಕ್ರಮ ನಡೆಸುವಲ್ಲಿ ಅಗತ್ಯ ಸಲಹೆ ಸೂಚನೆಗಳನ್ನು ನೀಡುವಂತೆ ತಿಳಿಸಿದರು. ಈಗಾಗಲೇ ಲೋಕ ಅದಾಲತ್‌ನಲ್ಲಿ 705 ವಿವಿಧ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ. ಮುಂದಿನ ಸೆಪ್ಟಂಬರ್ 10 ರಂದು ಜಿಲ್ಲೆಯಲ್ಲಿ ರಾಷ್ಟ್ರೀಯ ಲೋಕ ಅದಾಲತ್ ನಡೆಸಲಾಗುತ್ತಿದ್ದು, ರಾಜಿ ಆಗಬಹುದಾದ ಪ್ರಕರಣಗಳನ್ನು ಇತ್ಯರ್ಥಪಡಿಸುವಲ್ಲಿ ದೂರುದಾರರಿಗೆ ಮಾಹಿತಿ ಕೊಡುವಲ್ಲಿ ಪೊಲೀಸ್ ಅಧಿಕಾರಿಗಳು ಸಹಕರಿಸಬೇಕು ಎಂದರು.
ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಮಾತನಾಡಿ, ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಪ್ರದೇಶದವರು ಇದ್ದಾರೆ. ಅದರಲ್ಲೂ ಕುಗ್ರಾಮ ಹಾಗೂ ಹಾಡಿಗಳ ಜನರಿಗೆ ಕಾನೂನಿನ ಅರಿವು ಮತ್ತು ಸಲಹೆ ದೊರೆಯಬೇಕಿದೆ ಎಂದರು. ಅರಣ್ಯವಾಸಿ ಅಥವಾ ಹಾಡಿಗಳಲ್ಲಿ ವಾಸಿಸುವ ಜನರಿಗೆ ಇಲಾಖೆಯ ಸೌಲಭ್ಯಗಳನ್ನು ತಿಳಿಸುವುದರ ಜೊತೆಗೆ ಕಾನೂನಡಿಯಲ್ಲಿರುವ ಸೇವೆಗಳ ಪರಿಚಯ ಸಿಗಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ಸಲಹೆ ನೀಡಿದರು. ನಗರದ ಜಿಲ್ಲಾ ನ್ಯಾಯಾಲಯ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಒಂದನೆ ಅಪರ ಸತ್ರ ನ್ಯಾಯಾಧೀಶರಾದ ಪವನೇಶ್, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೋಹನ್ ಪ್ರಭು, ನ್ಯಾಯಾಧೀಶರಾದ ಟಿ.ಸಿ. ಶ್ರೀಕಾಂತ್, ಅನ್ನಪೂರ್ಣೇಶ್ವರಿ, ರಮೇಶ್ ಬಾಬು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಆರ್. ಬಸವರಾಜು, ಡಿವೈಎಸ್ಪಿಗಳಾದ ನಾಗಪ್ಪ, ಟಿ.ಕುಮಾರ್, ಎಸ್.ಬಿ.ಛಬ್ಬಿ, ಸರಕಾರಿ ವಕೀಲರಾದ ಶ್ರೀಧರ್ ನಾಯರ್, ಬಿಸಿಎಂ ಇಲಾಖೆ ಅಧಿಕಾರಿ ಕೆ.ವಿ. ಸುರೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಮುಮ್ತಾಜ್ ಮತ್ತಿತರರು ಭಾಗವಹಿಸಿದ್ದರು. ಸೆಪ್ಟ್ಟಂಬರ್ ಮೊದಲ ವಾರದಲ್ಲಿ ಅಪೌಷ್ಟಿಕತೆ ನಿವಾರಣೆ ಸಂಬಂಧ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಸಪ್ತಾಹ ಹಮ್ಮಿಕೊಳ್ಳಲಾಗುವುದು. ಸೆಪ್ಟಂಬರ್ 10ರಂದು ಮಾಸಿಕ ಲೋಕ ಅದಾಲತ್ ನಡೆಸಿ ರಾಜಿಯಾಗಬಹುದಾದಂತಹ ಪ್ರಕರಣಗಳನ್ನು ಇತ್ಯರ್ಥಪಡಿಸಲು ಅವಕಾಶ ಮಾಡುವುದು. ವಿವಿಧ ಸಂದರ್ಭದಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಸಂಬಂಧ ಕಾನೂನು ಸೇವಾ ಪ್ರಾಧಿಕಾರದೊಂದಿಗೆ ಕೈಜೋಡಿಸುವಂತೆ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ಸಲಹೆ ನೀಡಿದರು.







