ಹೆಚ್ಚುವರಿ ಅನುದಾನ ಕೋರಿ ಬೆಂಗಳೂರಿಗೆ ನಿಯೋಗ: ಜಯಶ್ರೀ ಮೊಗೇರ
ಜಿಪಂ ಸಾಮಾನ್ಯ ಸಭೆ

ಕಾರವಾರ, ಆ.23; ಜಿಲ್ಲಾ ಪಂಚಾಯತ್‌ಗೆ ಈ ಬಾರಿ ಅನುದಾನ ಬಿಡುಗಡೆಯಲ್ಲಿ ಕಡಿತ ಮಾಡಲಾಗಿದ್ದು, ಹೆಚ್ಚುವರಿ ಅನುದಾನ ಬಿಡುಗಡೆಗೆ ಕೋರಿ ಸೆ.15ರಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ಅವರನ್ನು ಭೇಟಿಯಾಗಲು ಸದಸ್ಯರ ನಿಯೋಗ ಕೊಂಡೊಯ್ಯಲಾಗುವುದು ಎಂದು ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ ಹೇಳಿದರು.
ಅವರು, ಮಂಗಳವಾರ ಜಿಪಂ ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದರು.
14ನೆ ಹಣಕಾಸಿನಲ್ಲಿ ಜಿಪಂಗೆ ನೀಡಿರುವ ಅನುದಾನ ಕಡಿಮೆಯಾಗಿದ್ದು, ಅನುದಾನ ಹೆಚ್ಚಳ ಸೇರಿದಂತೆ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಚಿವರ ಗಮನ ಸೆಳೆಯಲಾಗುವುದು ಎಂದರು.
nಶಿಕ್ಷಕರ ನಿಯೋಜನೆ: ಹೆಚ್ಚುವರಿ ಶಿಕ್ಷಕರ ನಿಯೋಜನೆಯಿಂದ ಗೊಂದಲಗಳು ಉಂಟಾಗಿದ್ದು, ಮಕ್ಕಳ ಶೈಕ್ಷಣಿಕ ಪ್ರಗತಿ ಮೇಲೆ ಪರಿಣಾಮ ಬೀರಲಿದೆ ಎಂದು ಹಲವು ಸದಸ್ಯರು ಧ್ವನಿ ಎತ್ತಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಇಂಗ್ಲಿಷ್ ಶಿಕ್ಷಕರು ಪ್ರತೀ ಶಾಲೆಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಒಂದು ವೇಳೆ ಒಂದು ಶಾಲೆಯಲ್ಲಿ ಇಲ್ಲದಿದ್ದರೆ ಹತ್ತಿರದ ಶಾಲೆಯಿಂದ ವಾರಕ್ಕೆ ಮೂರು ದಿನಗಳ ನಿಯೋಜನೆ ಅಥವಾ ಅತಿಥಿ ಶಿಕ್ಷಕರ ನೇಮಕ ಇತ್ಯಾದಿ ಬದಲಿ ವ್ಯವಸ್ಥೆ ಮಾಡಬೇಕು ಎಂದು ಡಿಡಿಪಿಐ ಅವರಿಗೆ ಸೂಚನೆ ನೀಡಿದರು.
nಹೊಸ ಅಂಗನವಾಡಿ ಪ್ರಸ್ತಾವನೆ: ಜಿಲ್ಲೆಯಲ್ಲಿ ಹೊಸದಾಗಿ 149ಅಂಗನವಾಡಿಗಳನ್ನು ನಿರ್ಮಿಸಲು ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಜಿಲ್ಲೆಗೆ ಈಗಾಗಲೇ 100 ಅಂಗನವಾಡಿಗಳು ಮಂಜೂರಾಗಿದ್ದು, 86ಅಂಗನವಾಡಿಗಳಿಗೆ ಅನುಮೋದನೆ ನೀಡಲಾಗಿದೆ. ಇನ್ನುಳಿದ 14ಅಂಗನವಾಡಿಗಳಿಗೆ ನಿವೇಶನ ದೊರೆತ ಕೂಡಲೇ ನಿರ್ಮಾಣಕ್ಕೆ ಅನುಮೋದನೆ ನೀಡಲಾಗುವುದು. ಶಾಲಾ ಆವರಣದಲ್ಲಿ ಅಂಗನವಾಡಿ ಕಟ್ಟುವ ಸಂದರ್ಭದಲ್ಲಿ ಎಸ್‌ಡಿಎಂಸಿ ಸದಸ್ಯರು ತಕರಾರು ಮಾಡಬಾರದು. ಮಕ್ಕಳ ಸುರಕ್ಷತೆ ಹಾಗೂ ಕಲಿಕೆ ದೃಷ್ಟಿಯಿಂದ ಶಾಲಾ ಆವರಣದಲ್ಲಿ ಅಂಗನವಾಡಿ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೇಳಿದರು.
ಎಸ್ಸಿ.ಎಸ್ಟಿ ಹಾಗೂ ಬಿಸಿಎಂ ಹಾಸ್ಟೆಲ್‌ಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ನಿವೇಶನ ಗುರುತಿಸಲಾಗಿದೆ. ಸೆ.10ರ ಒಳಗಾಗಿ ಎಲ್ಲ ಹಾಸ್ಟೆಲ್‌ಗಳಿಗೆ ನಿವೇಶನ ಗುರುತಿಸಲಾಗುವುದು. ಆದಷ್ಟು ಬೇಗನೆ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಬಿಸಿಎಂ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಹೇರ್‌ಕಟ್ಟಿಂಗ್‌ಗೆ ಪ್ರತೀ ತಿಂಗಳು 15 ರೂ. ನಿಗದಿಪಡಿಸಲಾಗಿದೆ. ಆದರೆ, ಆಶ್ರಮ ಶಾಲೆ ವಿದ್ಯಾರ್ಥಿಗಳ ಹೇರ್‌ಕಟ್ಟಿಂಗ್‌ಗೆ ಇದುವರೆಗೆ ಕೇವಲ ಒಂದು ರೂಪಾಯಿ ಇದ್ದು, ಈಗ 5ರೂ.ಗೆ ಏರಿಸಲಾಗಿದೆ. ಈ ರೀತಿಯ ತಾರತಮ್ಯ ಸರಿಯಲ್ಲ. ಈ ಕುರಿತು ಸರಕಾರದ ಗಮನ ಸೆಳೆಯಬೇಕಾಗಿದೆ ಎಂದು ಸದಸ್ಯರು ಸಭೆಯಲ್ಲಿ ತಿಳಿಸಿದರು.
nಫಸಲ್ ಬಿಮಾ ಯೋಜನೆ: ಕರ್ನಾಟಕ ರೈತ ಫಸಲ್ ಬಿಮಾ ಯೋಜನೆಯಡಿ ಜಿಲ್ಲೆಯಲ್ಲಿ 45ಸಾವಿರ ರೈತರು ಪ್ರೀಮಿಯಂ ಕಟ್ಟಿದ್ದಾರೆ. ಈ ವರ್ಷದಿಂದ ಬೆಳೆ ಹಾನಿಗೆ ಮಾಸಿಕ ನೀಡಿಕೆ ಮಾನದಂಡದಲ್ಲಿ ಬಹಳಷ್ಟು ಬದಲಾವಣೆ ಉಂಟಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದರು. ಉಪಾಧ್ಯಕ್ಷ ಸಂತೋಷ ರೇಣಕೆ, ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.







