ಅರವಿಂದ್ ಜಾಧವ್ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ಆ.23: ರಾಜ್ಯದ ಮುಖ್ಯಕಾರ್ಯದರ್ಶಿ ಅರವಿಂದ ಜಾಧವ್ ವಿರುದ್ಧ ಕೇಳಿ ಬಂದಿರುವ ಭೂ ಅಕ್ರಮ ಸಂಬಂಧದ ಆರೋಪ ಗಳ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಕಂದಾಯ ಇಲಾಖೆಗೆ ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ನಗರದ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾ ರರೊಂದಿಗೆ ಮಾತನಾಡಿದ ಅವರು, ಆರೋಪ ಗಳ ಬಗ್ಗೆ ಮಾಹಿತಿ ನೀಡುವಂತೆ ನಾನು ಮುಖ್ಯ ಕಾರ್ಯದರ್ಶಿಯವರಿಗೆ ಸೂಚನೆ ನೀಡಿಲ್ಲ. ಆದರೆ, ಕಂದಾಯ ಇಲಾಖೆಯಿಂದ ವರದಿ ಕೇಳಿದ್ದೇನೆ ಎಂದು ತಿಳಿಸಿದರು.
ಡಿಜಿಪಿ ಓಂಪ್ರಕಾಶ್‌ರ ಪುತ್ರ ಕಾರ್ತಿಕ್‌ರ ಕಿರುಕುಳದಿಂದ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಕೇಳಿ ಬಂದಿರುವ ಆರೋಪಗಳ ಬಗ್ಗೆ ತನಗೆ ಮಾಹಿತಿ ಬಂದಿಲ್ಲ. ಹೀಗಾಗಿ ಅದರ ಬಗ್ಗೆ ಗಮನಿಸಿದ ನಂತರ ಪ್ರತಿಕ್ರಿಯಿಸುತ್ತೇನೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮಾಗಡಿ ತಾಲೂಕಿನ ರೈತ ಶಿವಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದು, ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ತನ್ನ ಸೋದರನ ಜತೆ ವಿವಾದವಿದ್ದು, ಆತ ಡಿಜಿಪಿ ಓಂಪ್ರಕಾಶ್ ಪುತ್ರನ ಜತೆ ಗ್ರಾನೈಟ್ ವ್ಯಾಪಾರದಲ್ಲಿ ಪಾಲುದಾರನಾಗಿದ್ದು, ಪ್ರಭಾವ ಬಳಸಿ ನನಗೆ ಪೊಲೀಸರ ಮೂಲಕ ಅನಗತ್ಯ ಕಿರುಕುಳ ಕೊಡುತ್ತಿದ್ದಾನೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ, ನನ್ನ ಕುಟುಂಬಸ್ಥರ ಮೇಲೆಯೇ ಪ್ರಕರಣ ದಾಖಲಿಸಿದ್ದಾರೆ ಎಂದು ರೈತ ಶಿವಣ್ಣ ಆತ್ಮಹತ್ಯೆಗೂ ಮುನ್ನ ಆರೋಪಿಸಿದ್ದಾರೆ. ಈ ಬಗ್ಗೆ ಮಾಹಿತಿಯಿಲ್ಲವೆಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.