ಆಂಧ್ರದಲ್ಲಿ ಸಿಂಧುಗೆ ರತ್ನಗಂಬಳಿ ಸ್ವಾಗತ

ವಿಜಯವಾಡ, ಆ.23: ರಿಯೋ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿ ಐತಿಹಾಸಿಕ ಸಾಧನೆ ಮಾಡಿದ್ದ ಪಿ.ವಿ. ಸಿಂಧುಗೆ ಆಂಧ್ರ ಸರಕಾರ ರತ್ನಗಂಬಳಿ ಸ್ವಾಗತ ನೀಡಿದೆ.
ತೆಲಂಗಾಣ ಸರಕಾರ ಸೋಮವಾರ ಸಿಂಧು ಹಾಗೂ ಅವರ ಕೋಚ್ ಗೋಪಿಚಂದ್‌ರನ್ನು ತೆರೆದ ಬಸ್ಸಿನಲ್ಲಿ ಮೆರವಣಿಗೆ ಮಾಡಿ ಸನ್ಮಾನಿಸಿತ್ತು. ತೆಲಂಗಾಣ ಸರಕಾರ ಸನ್ಮಾನಿಸಿದ ಮರುದಿನವೇ ಸ್ಪರ್ಧೆಗೆ ಬಿದ್ದವರಂತೆ ಆಂಧ್ರ ಸರಕಾರ ಕೂಡ ಸಿಂಧು ಹಾಗೂ ಅವರ ಕೋಚ್ ಗೋಪಿಚಂದ್‌ರನ್ನು ಗನ್ನಾವರಂ ಏರ್‌ಪೋರ್ಟ್‌ನಿಂದ ಇಂದಿರಾ ಗಾಂಧಿ ಸ್ಟೇಡಿಯಂನ ತನಕ ಶೃಂಗರಿಸಲ್ಪಟ್ಟ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕರೆ ತಂದಿತು. ವಿಜಯವಾಡ ಮಾರ್ಗದುದ್ದಕ್ಕೂ ನೆರೆದಿದ್ದ ಜನಸ್ತೋಮದತ್ತ ಕೈಬೀಸಿದರು.
ಬಿಳಿಬಟ್ಟೆ ಧರಿಸಿದ್ದ ಸಿಂಧು ಬೆಳ್ಳಿ ಪದಕವನ್ನು ಕೊರಳಿಗೆ ಧರಿಸಿಕೊಂಡು ತನ್ನನ್ನು ಸ್ವಾಗತಿಸಲು ಬಂದಿದ್ದ ತವರಿನ ಅಭಿಮಾನಿಗಳತ್ತ ಕೈಬೀಸಿದರು. ಕೋಚ್ ಗೋಪಿಚಂದ್ ಅಭಿಮಾನಿಗಳತ್ತ ತ್ರಿವರ್ಣ ಧ್ವಜವನ್ನು ಬೀಸಿದರು.
ತೆರೆದ ವಾಹನದಲ್ಲಿ ಬಿಎಐ ಕಾರ್ಯದರ್ಶಿ, ಆಂಧ್ರಪ್ರದೇಶ ಬ್ಯಾಡ್ಮಿಂಟನ್ ಅಸೋಸಿಯೇಶನ್‌ನ ಸಿಇಒ ಕೆ. ಪುಣೈಯ್ಯ ಚೌಧರಿ, ಸಿಂಧು ತಂದೆ ಪಿ.ವಿ. ರಮಣ ಉಪಸ್ಥಿತರಿದ್ದರು.
ಸನ್ಮಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಸಿಂಧುಗೆ 3 ಕೋಟಿ ರೂ. ಹಾಗೂ 1000 ಚದರ ಅಡಿ ನಿವೇಶನವನ್ನು ಉಡುಗೊರೆಯಾಗಿ ನೀಡಿದರು.
ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡು ಬಾರಿ ಕಂಚಿನ ಪದಕ ಜಯಿಸಿದ್ದ ಸಿಂಧು ರಿಯೋ ಒಲಿಂಪಿಕ್ಸ್ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಸ್ಪೇನ್‌ನ ವಿಶ್ವದ ನಂ.1 ಆಟಗಾರ್ತಿ ಕ್ಯಾರೊಲಿನಾ ಮರಿನ್ ವಿರುದ್ಧ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಮೊದಲ ಬ್ಯಾಡ್ಮಿಂಟನ್ ಆಟಗಾರ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದರು.







