ಝಿಕಾ ವೈರಸ್ ಭೀತಿಯಿಂದ ಪಾರಾದ ಅಥ್ಲೀಟ್ ಸುಧಾ ಸಿಂಗ್
ಎಚ್1ಎನ್1ಗೆ ಚಿಕಿತ್ಸೆ, ಚಿಕಿತ್ಸಾ ವೆಚ್ಚ ಭರಿಸಲಿರುವ ರಾಜ್ಯಸರಕಾರ

ಬೆಂಗಳೂರು, ಆ.23: ರಿಯೋ ಒಲಿಂಪಿಕ್ಸ್‌ನ ವೇಳೆ ಅನಾರೋಗ್ಯಕ್ಕೆ ಒಳಗಾಗಿದ್ದ ಭಾರತದ ಅಥ್ಲೀಟ್ ಸುಧಾ ಸಿಂಗ್ ನಗರದ ನಾಗರಬಾವಿಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಿಗೆ ಝಿಕಾ ವೈರಸ್ ಭೀತಿಯಿಲ್ಲ ಎಂದು ರಕ್ತ ಪರೀಕ್ಷೆಯಿಂದ ದೃಢಪಟ್ಟಿದೆ.
ಸುಧಾ ರಕ್ತ ಮಾದರಿಯ ಪರೀಕ್ಷೆಯಲ್ಲಿ ಎಚ್1ಎನ್1ನಿಂದ ಬಳಲುತ್ತಿರುವುದು ದೃಢಪಟ್ಟಿದ್ದು, ವೈದ್ಯರು ಆ ಕಾಯಿಲೆಗೆ ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ. ಬ್ರೆಝಿಲ್‌ನಿಂದ ವಾಪಸಾದ ತಕ್ಷಣ ಜ್ವರ, ಗಂಟುನೋವು ಹಾಗೂ ಲೋ ಬಿಪಿ ಕಾರಣದಿಂದ ಶನಿವಾರ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು. ಝಿಕಾ ವೈರಸ್ ಶಂಕೆಯ ಮೇರೆಗೆ ಸುಧಾರ ರಕ್ತದ ಮಾದರಿಯನ್ನು ಪುಣೆಯ ಪ್ರಯೋಗಾಯಕ್ಕೆ ಕಳುಹಿಸಲಾಗಿತ್ತು.
ಪುಣೆಯಲ್ಲಿರುವ ರಾಷ್ಟ್ರೀಯ ವೈರಾಣು ಸಂಸ್ಥೆಯಲ್ಲಿ ನಡೆಸಲಾದ ರಕ್ತ ಪರೀಕ್ಷೆಯಲ್ಲಿ ಬ್ರೆಝಿಲ್‌ನ ಜನತೆಯನ್ನು ಕಾಡುತ್ತಿರುವ ಝಿಕಾ ವೈರಸ್ ಇಲ್ಲವೆನ್ನುವುದು ದೃಢಪಟ್ಟಿದೆ. ಒಲಿಂಪಿಕ್ಸ್‌ನಲ್ಲಿ 3,000 ಮೀ. ಸ್ಟೀಪಲ್‌ಚೇಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಸುಧಾ ಅವರನ್ನು ರಾಜ್ಯ ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.
ಸುಧಾ ಚಿಕಿತ್ಸಾ ವೆಚ್ಚ ಸರಕಾರವೇ ಭರಿಸಲಿದೆ: ಸಿಎಂ
ಅನಾರೋಗ್ಯದಿಂದ ಬಳಲುತ್ತಿರುವ ಅಥ್ಲೀಟ್ ಸುಧಾ ಸಿಂಗ್ ನೆರವಿಗೆ ರಾಜ್ಯ ಸರಕಾರ ಮುಂದಾಗಿದೆ. ಸುಧಾರ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಭರವಸೆ ನೀಡಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿ ಸುಧಾಸಿಂಗ್ ಅವರ ಚಿಕಿತ್ಸೆ ಬಗ್ಗೆ ಗಮನ ಹರಿಸುವಂತೆ ಒಲಿಂಪಿಕ್ಸ್ ಅಸೋಸಿಯೇಶನ್ ಅಧ್ಯಕ್ಷ ಹಾಗೂ ತಮ್ಮ ಸಂಸದೀಯ ಕಾರ್ಯದರ್ಶಿ ಗೋವಿಂದರಾಜು ಅವರಿಗೆ ಸಿಎಂ ಸೂಚಿಸಿದ್ದಾರೆ. ಸುಧಾ ಬೇಗನೆ ಚೇತರಿಸಿಕೊಳ್ಳಲಿ ಎಂದು ಶುಭ ಹಾರೈಸಿದ್ದಾರೆ.







