ಉದ್ಘಾಟನಾ ಭಾಗ್ಯ ಕಾಣದ ಹೈಟೆಕ್ ಮೀನು ಮಾರುಕಟ್ಟೆ
ಮಾನ್ಯರೆ,
ಉಡುಪಿಯಲ್ಲಿ ಮೀನುಗಾರ ಮಹಿಳೆಯರಿಗೆ ಮೀನು ಮಾರುಕಟ್ಟೆ ಸೌಕರ್ಯದ ಕೊರತೆಯಿದೆ. ಈಗಾಗಲೇ ಭರ್ತಿ ನಾಲ್ಕುವರೆ ವರ್ಷ ತೆಗೆದುಕೊಂಡು 2 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಮೀನು ಮಾರುಕಟ್ಟೆಯ ಕಟ್ಟಡ ಪೂರ್ಣಗೊಂಡಿದ್ದರೂ, ಉದ್ಘಾಟನಾ ಭಾಗ್ಯ ಕಂಡಿಲ್ಲ. ಬೀಡಿನಗುಡ್ಡೆಯ ತಾತ್ಕಾಲಿಕ ಮೀನು ಮಾರುಕಟ್ಟೆಯಲ್ಲಿ ಇದೀಗ ವ್ಯಾಪಾರ ವಹಿವಾಟು ನಡೆಯುತ್ತಿದ್ದು, ಆ ಜಾಗ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಅದಲ್ಲದೆ, ಮಾರುಕಟ್ಟೆಯ ಸುತ್ತ-ಮುತ್ತ ಕೊಳಚೆಗಳಿರುವುದರಿಂದ ಮೀನುಗಾರ ಮಹಿಳೆಯರು ಆರೋಗ್ಯದ ಬಗ್ಗೆ ಭೀತಿ ಎದುರಿಸುವಂತಾಗಿದೆ.
ಸ್ವತಃ ಉಡುಪಿಯವರೇ ಮೀನುಗಾರಿಕಾ ಸಚಿವರಾಗಿದ್ದರೂ ಮೀನು ಮಾರುಕಟ್ಟೆ ಇನ್ನೂ ಉದ್ಘಾಟನಾ ಭಾಗ್ಯ ಕಾಣದಿರುವುದು ಬೇಸರವಾಗಿದೆ. ವರ್ಷಗಳಿಂದ ಈ ಹೈಟೆಕ್ ಮೀನು ಮಾರುಕಟ್ಟೆ ಕೇವಲ ಪ್ರಚಾರದ ವಿಷಯವಾಗಿರುವುದು ಬಿಟ್ಟರೆ, ಬೇರೇನೂ ಆಗಿಲ್ಲ. ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಈ ಹೈಟೆಕ್ ಮೀನು ಮಾರುಕಟ್ಟೆ ಇನ್ನೂ ಆರಂಭಗೊಂಡಿಲ್ಲ. ಸಂಬಂಧ ಪಟ್ಟ ಇಲಾಖೆಯವರು ಈ ಬಗ್ಗೆ ಕ್ರಮ ಕೈಗೊಂಡು ಕೊಳಚೆಯಲ್ಲಿರುವ ತಾತ್ಕಾಲಿಕ ಮೀನು ಮಾರುಕಟ್ಟೆಗೆ ಇನ್ನಾದರೂ ಮುಕ್ತಿ ಕೊಡಬೇಕು.







