ಭಾರತ ಸಲ್ಲಿಸಿದ್ದ ದಾವೂದ್‌ನ 9 ವಿಳಾಸಗಳ ಪೈಕಿ 3 ತಪ್ಪು: ವಿಶ್ವಸಂಸ್ಥೆ
ವಿಶ್ವಸಂಸ್ಥೆ,ಆ.23: ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹೀಂನದ್ದೆಂದು ಹೇಳಿಕೊಂಡು ಭಾರತವು ತನಗೆ ಸಲ್ಲಿಸಿರುವ 9 ವಿಳಾಸಗಳ ಪೈಕಿ 3 ವಿಳಾಸಗಳು ತಪ್ಪೆಂದು ವಿಶ್ವಸಂಸ್ಥೆಯ ಸಮಿತಿ ತಿಳಿಸಿದೆ ಹಾಗೂ ಅವುಗಳನ್ನು ಪಟ್ಟಿಯಿಂದ ತೆಗೆದುಹಾಕಿದೆ. ಉಳಿದ 6 ವಿಳಾಸಗಳಲ್ಲಿ ಯಾವುದೇ ತಿದ್ದುಪಡಿ ಮಾಡದೆ ಅವನ್ನು ಪಟ್ಟಿಯಲ್ಲಿ ಉಳಿಸಿಕೊಂಡಿದೆ.
ಈ ಪೈಕಿ ಒಂದು ವಿಳಾಸವು ವಿಶ್ವಸಂಸ್ಥೆಯಲ್ಲಿನ ಪಾಕ್ ರಾಯಭಾರಿ ಮಲೀಹಾ ಲೋಧಿ ಅವರ ಇಸ್ಲಾಮಾಬಾದ್‌ನ ನಿವಾಸದ ವಿಳಾಸದ ಜೊತೆ ಸಾಮ್ಯತೆಯನ್ನು ಹೊಂದಿರುವುದನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಲ್‌ಖಾಯಿದಾ ವಿರುದ್ಧ ನಿರ್ಬಂಧಗಳ ಸಮಿತಿಯು ಪತ್ತೆಹಚ್ಚಿದೆ ಹಾಗೂ ಅದನ್ನು ಪಟ್ಟಿಯಿಂದ ಕೈಬಿಟ್ಟಿದೆ.
ಕರಾಚಿಯ ಮರ್ಗಲ್ಲಾ ರೋಡ್‌ನ ಎಫ್6/2/ ರಸ್ತೆ ನಂ.22, ಮನೆ ನಂ.07 ವಿಳಾಸವು ಮಲೇಹಾ ಲೋಧಿ ಅವರಿಗೆ ಸೇರಿದ್ದಾಗಿದೆ
ಜೊತೆಗೆ ಕರಾಚಿಯ ಕ್ಲಿಪ್ಟನ್‌ನ ತಲ್ವಾರ್ ಪ್ರದೇಶದಲ್ಲಿರುವ ಪರದೇಶಿ ಹೌಸ್-3 ಮತ್ತು 6/ಎ ಜೌಬಾಮ್ ತಂಝೀಮ್, 5ನೇ ಹಂತ, ರಕ್ಷಣಾ ವಸತಿ ಸಂಕೀರ್ಣ ಈ ವಿಳಾಸಗಳೂ ತಪ್ಪೆಂದು ವಿಶ್ವಸಂಸ್ಥೆ ಸಮಿತಿ ತಿಳಿಸಿದೆ.ಆದಾಗ್ಯೂ ಭಾರತವು ಒದಗಿಸಿರುವ ಇತರ ಆರು ವಿಳಾಸಗಳನ್ನು ವಿಶ್ವಸಂಸ್ಥೆ ಪುರಸ್ಕರಿಸಿದೆ.
ಕರಾಚಿಯ ಕ್ಲಿಫ್ಟನ್ ಪ್ರದೇಶದಲ್ಲಿರುವ ವೈಟ್‌ಹೌಸ್, ಮನೆ ನಂ.37-30 ರಸ್ತೆ, ಕರಾಚಿಯ ರಕ್ಷಣಾ ವಸತಿ ಪ್ರಾಧಿಕಾರ ಹಾಗೂ ಕರಾಚಿಯ ನೂರ್‌ಬಾದ್‌ನಲ್ಲಿರುವ ಭವ್ಯವಾದ ಬಂಗಲೆ ಸೇರಿದಂತೆ ಒಟ್ಟು ಆರು ವಿಳಾಸಗಳನ್ನು ದಾವೂದ್‌ನ ವಿಳಾಸಗಳೆಂದು ಗುರುತಿಸಲಾಗಿದ್ದು, ಅವನ್ನು ಪಟ್ಟಿಯಲ್ಲಿ ಉಳಿಸಿಕೊಳ್ಳಲಾಗಿದೆ.
1993 ಮುಂಬೈ ಸರಣಿ ಸ್ಫೋಟ ಸೇರಿದಂತೆ ಭಾರತದಲ್ಲಿ ಹಲವು ಅಪರಾಧ ಕೃತ್ಯಗಳಿಗೆ ದಾವೂದ್ ಸೂತ್ರಧಾರಿಯಾಗಿದ್ದು, ಆತನನ್ನು ತನಗೆ ಹಸ್ತಾಂತರಿಸಬೇಕೆಂದು ಭಾರತವು ನಿರಂತರವಾಗಿ ಆಗ್ರಹಿಸುತ್ತಿದೆ.
ದಾವೂದ್ ಪಾಕಿಸ್ತಾನದಲ್ಲಿದ್ದಾನೆಂದು ಆರೋಪಿಸುತ್ತಿರುವ ಭಾರತವು ಈ ಸಂಬಂಧವಾದ ವಿವರಗಳನ್ನು ಕಳೆದ ವರ್ಷದ ಆಗಸ್ಟ್‌ನಲ್ಲಿ ವಿಶ್ವಸಂಸ್ಥೆಗೆ ಸಲ್ಲಿಸಿತ್ತು. ಪಾಕಿಸ್ತಾನದಲ್ಲಿ ಭಾರೀ ಪ್ರಮಾಣದ ಆಸ್ತಿಪಾಸ್ತಿಗಳನ್ನು ಹೊಂದಿರುವ ದಾವೂದ್ ನಿರಂತರವಾಗಿ ತನ್ನ ವಾಸ್ತವ್ಯ ಸ್ಥಳವನ್ನು ಬದಲಾಯಿಸುತ್ತಿದ್ದಾನೆಂದು ಭಾರತ ವಾದಿಸುತ್ತಿದ್ದು, ತಾನು ಸಂಗ್ರಹಿಸಿರುವ ಮಾಹಿತಿಗಳ ಆಧಾರದಲ್ಲಿ ಅದು ಈ ವಿಳಾಸಗಳನ್ನು ವಿಶ್ವಸಂಸ್ಥೆಗೆ ನೀಡಿತ್ತು. 2013ರ ಸೆಪ್ಟಂಬರ್‌ನಲ್ಲಿ ದಾವೂದ್ ಪಾಕಿಸ್ತಾನದಲ್ಲಿ ಖರೀದಿಸಿರುವ ನೂತನ ಮನೆಯೊಂದರ ವಿವರಗಳನ್ನು ಕೂಡಾ ಭಾರತವು ವಿಶ್ವಸಂಸ್ಥೆ ಸಮಿತಿಗೆ ಸಲ್ಲಿಸಿದೆ.
ಆದರೆ ಭಾರತದ ಈ ಆರೋಪವನ್ನು ನಿರಾಕರಿಸುತ್ತಿರುವ ಪಾಕಿಸ್ತಾನವು, ತನ್ನಲ್ಲಿ ದಾವೂದ್ ಆಶ್ರಯ ಪಡೆದಿಲ್ಲವೆಂದು ಹೇಳಿದೆ.







