ತಮಿಳುನಾಡಿಗೆ ನೀರು ಬಿಡುವುದು ಅಸಾಧ್ಯ: ಸಚಿವ ಜಯಚಂದ್ರ
ಬೆಂಗಳೂರು, ಆ.23: ಕೃಷ್ಣರಾಜ ಸಾಗರ(ಕೆಆರ್‌ಎಸ್) ಸೇರಿದಂತೆ ರಾಜ್ಯದ ಬಹುತೇಕ ಜಲಾಶಯ ಗಳು ಖಾಲಿಯಿದ್ದು, ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ. ಇಂತಹ ಸ್ಥಿತಿಯಲ್ಲಿ ಸಂಕಷ್ಟ ಸೂತ್ರದನ್ವಯವೂ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಕಾನೂನು ಸಚಿವ ಜಯಚಂದ್ರ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಸರಕಾರಕ್ಕೆ ರಾಜ್ಯದ ವಸ್ತುಸ್ಥಿತಿ ಮನವರಿಕೆ ಮಾಡಿಕೊಡಲಾಗುವುದು. ಬೆಂಗಳೂರು, ಹಾಸನ, ತುಮಕೂರು ಸೇರಿ ನಾಲ್ಕೈದು ಜಿಲ್ಲೆಗಳ ಪ್ರಮುಖ ಪಟ್ಟಣಗಳ ಜನತೆ ಕುಡಿಯುವ ನೀರಿಗೆ ಈ ಜಲಾಶಯಗಳ ನೀರನ್ನೇ ಆಶ್ರಯಿಸಬೇಕಿದೆ ಎಂದರು.
ನಮ್ಮ ರಾಜ್ಯದಲ್ಲಿ ಕುಡಿಯಲು ನೀರಿಲ್ಲದ ಪರಿಸ್ಥಿತಿ ಇದ್ದು, ತಮಿಳುನಾಡು ಬೆಳೆ ಬೆಳೆಯಲು ನೀರು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದ ಜಯಚಂದ್ರ, ಮಳೆಯೇ ಎಲ್ಲ ಸಮಸ್ಯೆಗೆ ಉತ್ತರವಾಗಿದ್ದು, ಮಳೆ ಬೀಳದಿದ್ದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ನಿಯೋಗ ಕರೆದೊಯ್ಯಲು ಸಿದ್ಧ: ಕೊಬ್ಬರಿ, ತೆಂಗು ಮತ್ತು ಅಡಿಕೆಗೆ ಸೂಕ್ತ ಬೆಲೆ ನಿಗದಿಗೆ ಸಂಬಂಧಿಸಿದಂತೆ ಕೇಂದ್ರಕ್ಕೆ ನಿಯೋಗ ಕೊಂಡೊಯ್ಯಲು ರಾಜ್ಯ ಸರಕಾರ ಸಿದ್ಧವಿದೆ. ಆದರೆ, ಈ ಬಗ್ಗೆ ಕೇಂದ್ರ ಸರಕಾರ ಹಾಗೂ ಬಿಜೆಪಿ ಸಂಸದರು ದೊಡ್ಡ ಮನಸ್ಸು ಮಾಡಬೇಕೆಂದು ಅವರು ಕೋರಿದರು.ಂಡೊನೇಷ್ಯಾ, ಸಿಲೋನ್ ಸೇರಿದಂತೆ ಹೊರ ದೇಶಗಳಿಂದ ಕೊಬ್ಬರಿ ಮತ್ತು ತೆಂಗಿನಕಾಯಿ ದೊಡ್ಡ ಪ್ರಮಾಣದಲ್ಲಿ ಕಳ್ಳದಾರಿಗಳ ಮೂಲಕ ನಮ್ಮ ದೇಶಕ್ಕೆ ಬರುತ್ತಿದೆ. ಹೀಗಾಗಿ ದೇಶದಲ್ಲಿ ತೀವ್ರ ಪ್ರಮಾಣದಲ್ಲಿ ಕೊಬ್ಬರಿ ಮತ್ತು ತೆಂಗಿನಕಾಯಿ ಬೆಲೆ ಕುಸಿತ ಉಂಟಾಗಿದೆ. ಹೀಗಾಗಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ಬೆಂಬಲ ಬೆಲೆ ಯೋಜನೆಯಡಿ ಕೃಷಿ ಉತ್ಪನ್ನಗಳ ಖರೀದಿಗೆ ಮೀಸಲಿಟ್ಟದ್ದ 1 ಸಾವಿರ ಕೋಟಿ ರೂ. ಆವರ್ತನಿಧಿಯ ಪೈಕಿ ಈಗಾಗಲೇ 850 ಕೋಟಿ ರೂ. ರಾಜ್ಯ ಸರಕಾರ ವೆಚ್ಚ ಮಾಡಿದೆ. ಆದರೆ, ಕೇಂದ್ರ ಸರಕಾರ ತನ್ನ ಬಾಪ್ತಿನ 1,600 ಕೋಟಿ ರೂ. ಬಿಡುಗಡೆ ಮಾಡಲು ಮೀನಮೇಷ ಎಣಿಸುತ್ತಿದೆ ಎಂದು ದೂರಿದರು.
ಬೆಂಬಲ ಬೆಲೆ ಯೋಜನೆಯಡಿ ತೆಂಗು, ಕೊಬ್ಬರಿ ಮತ್ತು ಅಡಿಕೆ ಖರೀದಿ ಮಾಡಲು ಕೇಂದ್ರ ಸರಕಾರಕ್ಕೆ ಸಾಧ್ಯವಾಗದೆ ಇದ್ದರೆ ಸೂಕ್ತ ಬೋನಸ್ ಮೊತ್ತ ಘೋಷಿಸಿದರೆ, ರಾಜ್ಯ ಸರಕಾರವೂ ಅದಕ್ಕೆ ಮತ್ತಷ್ಟು ಮೊತ್ತವನ್ನು ಸೇರಿಸಿ ರೈತರಿಗೆ ನೆರವಾಗಲಿದೆ ಎಂದು ಜಯಚಂದ್ರ ಸ್ಪಷ್ಟಣೆ ನೀಡಿದರು.





