ನೇಪಾಳದ ಮಾಜಿ ರಾಜಮಾತೆಯಿಂದ 30 ಲಕ್ಷ ರೂ. ವಿದ್ಯುತ್ ಬಿಲ್ ಬಾಕಿ!
ಅರಮನೆಗೆ ವಿದ್ಯುತ್ ಪೂರೈಕೆ ಕಡಿತ
ಕಠ್ಮಂಡು,ಆ.23: ನೇಪಾಳದ ಪದಚ್ಯುತ ದೊರೆ ಜ್ಞಾನೇಂದ್ರ ಅವರ ಮಲತಾಯಿ, ಮಾಜಿ ರಾಣಿ ರತ್ನಾ ರಾಜ್ಯ ಲಕ್ಷ್ಮಿ ಶಹಾ ಅವರು 30.70 ಲಕ್ಷ ರೂ.ಮೊತ್ತದ ವಿದ್ಯುತ್ ಬಿಲ್ ಪಾವತಿಸಲು ವಿಫಲರಾಗಿರುವ ಕಾರಣ ಅವರ ನಿವಾಸದ ವಿದ್ಯುತ್ ಸಂಪರ್ಕವನ್ನು ನೇಪಾಳ ಸರಕಾರ ಕಡಿತಗೊಳಿಸಿದೆ. ನೇಪಾಳದಲ್ಲಿ ಅರಸೊತ್ತಿಗೆಯು 2008ರಲ್ಲಿ ರದ್ದಾಗಿದ್ದು, ಆವಾಗಿನಿಂದ ರತ್ನ್ನಾ ರಾಜ್ಯ ಲಕ್ಷ್ಮಿ ಅವರು ವಿದ್ಯುತ್ ಬಿಲ್ ಪಾವತಿಸದೆ ಬಾಕಿಯುಳಿಸಿದ್ದಾರೆಂದು ನೇಪಾಳ ವಿದ್ಯುತ್ ಪ್ರಾಧಿಕಾರದ ಉಪ ಕಾರ್ಯಕಾರಿ ನಿರ್ದೇಶಕ ಗೋಪಾಲ್ ಬಾಬು ಭಟ್ಟಾರಾಯ್ ತಿಳಿಸಿದ್ದಾರೆ.
ರಾಜಾಡಳಿತ ರದ್ದುಗೊಂಡ ಬಳಿಕ ರಾಜಕುಟುಂಬದ ಇತರ ಸದಸ್ಯರು ಅರಮನೆಯನ್ನು ತೊರೆದುಹೋಗಿದ್ದರು. ಆದರೆ ರತ್ನ್ನಾ ಅವರು, ತನ್ನ ಪತಿ ಮಹೇಂದ್ರ ಐದು ದಶಕಗಳ ಹಿಂದೆ ಉಡುಗೊರೆಯಾಗಿ ನೀಡಿದ್ದ ಈ ನಿವಾಸದಲ್ಲಿ ವಾಸವಾಗಿದ್ದರು. ಆನಂತರ ಈ ನಿವಾಸವನ್ನೂ ಮ್ಯೂಸಿಯಂ ಆಗಿ ಪರಿವರ್ತಿಸಲಾಗಿತ್ತು.
ಈ ಮಧ್ಯೆ ಮಾಜಿ ರಾಜಮಾತೆಯ ಖಾಸಗಿ ಕಾರ್ಯದರ್ಶಿ ಶಂಭು ಅಧಿಕಾರಿ ಹೇಳಿಕೆಯೊಂದನ್ನು ನೀಡಿ, ‘‘ಈ ನಿವಾಸವು ಮ್ಯೂಸಿಯಂ ಕೂಡಾ ಆಗಿರುವ ಕಾರಣ ಅರಮನೆಯ ಸಿಬ್ಬಂದಿ ವಿದ್ಯುತ್ ಬಳಕೆಯ ಬಿಲ್‌ಗಳನ್ನು ನಾಗರಿಕ ವಾಯುಯಾನ ಹಾಗೂ ಸಂಸ್ಕೃತಿ ಸಚಿವಾಲಯಕ್ಕೆ ಒಪ್ಪಿಸಲಾಗುತ್ತಿತ್ತು. ಒಂದೋ ಮಹೇಂದ್ರ ಮಂಜಿಲ್ ಅರಮನೆಯನ್ನು ರತ್ನಾ ಅವರ ವೈಯಕ್ತಿಕ ಆಸ್ತಿಯೆಂದು ಪರಿಗಣಿಸಬೇಕು ಇಲ್ಲವೇ ಸರಕಾರವು ತಾನಾಗಿಯೇ ಅದರ ವಿದ್ಯುತ್, ನೀರು ಹಾಗೂ ದೂರವಾಣಿ ಬಿಲ್‌ಗಳನ್ನು ಪಾವತಿಸಬೇಕು’’ ಎಂದು ಆಗ್ರಹಿಸಿದ್ದಾರೆ.







