ಎನ್‌ಎಸ್‌ಜಿ ಸೇರ್ಪಡೆಗೆ ಪಾಕ್ ಯತ್ನ
ಬೆಲಾರಸ್, ಕಝಕಿಸ್ತಾನಕ್ಕೆ ವಿಶೇಷ ಪ್ರತಿನಿಧಿ ದೌಡು
ಇಸ್ಲಾಮಾಬಾದ್,ಆ.23: ಪರಮಾಣು ಪೂರೈಕೆದಾರರ ಗುಂಪಿನ (ಎನ್‌ಎಸ್‌ಜಿ) ಸದಸ್ಯತ್ವವನ್ನು ಪಡೆಯಲು ಭಾರತವು ಶ್ರಮಿಸುತ್ತಿರುವಂತೆಯೇ, ನೆರೆಯ ರಾಷ್ಟ್ರ ಪಾಕಿಸ್ತಾನ ಕೂಡಾ ಈ ನಿಟ್ಟಿನಲ್ಲಿ ಪ್ರಯತ್ನವನ್ನು ಆರಂಭಿಸಿದೆ. ಎನ್‌ಎಸ್‌ಜಿ ಸದಸ್ಯತ್ವವನ್ನು ಪಡೆಯುವುದಕ್ಕಾಗಿ ಇತರ ರಾಷ್ಟ್ರಗಳ ಬೆಂಬಲವನ್ನು ಪಡೆಯುವ ತನ್ನ ಅಭಿಯಾನದ ಅಂಗವಾಗಿ ಪಾಕಿಸ್ತಾನವು ಬೆಲಾರಸ್ ಹಾಗೂ ಕಝಕಿಸ್ತಾನಗಳಿಗೆ ಪ್ರಧಾನಿ ನವಾಝ್ ಶರೀಫ್ ಅವರ ವಿಶೇಷ ವಿದೇಶಾಂಗ ಸಹಾಯಕ ಸೈಯದ್ ತಾರೀಖ್ ಫಾತೇಮಿ ಅವರನ್ನು ಕಳುಹಿಸಿದೆ. ಪ್ರಧಾನಿ ನವಾಝ್ ಶರೀಫ್‌ರ ವಿಶೇಷ ದೂತನಾಗಿ ಫಾತೆಮಿ ಅವರು ಆಗಸ್ಟ್ 23 ಹಾಗೂ 27ರಂದು ಕಝಕಿಸ್ತಾನ್ ಹಾಗೂ ಬೆಲಾರಸ್‌ಗೆ ಭೇಟಿ ನೀಡಲಿದ್ದಾರೆಂದು ಪಾಕ್ ವಿದೇಶಾಂಗ ಕಚೇರಿಯ ಹೇಳಿಕೆ ತಿಳಿಸಿದೆ.
ಈ ವಿಷಯವಾಗಿ ಬೆಲಾರಸ್‌ನ ಅಧ್ಯಕ್ಷ ಅಲೆಕ್ಸಾಂಡರ್ ಲ್ಯೂಕಾಶೆಂಕೊ ಹಾಗೂ ಕಝಕಿಸ್ತಾನ ಅಧ್ಯಕ್ಷ ನೂರ್‌ಸುಲ್ತಾನ್ ನಝರ್‌ಬಯೆವ್ ಅವರಿಗೆ ನವಾಝ್ ಶರೀಫ್ ಬರೆದ ಪತ್ರಗಳನ್ನು ವಿಶೇಷ ಸಹಾಯಕರು ಹಸ್ತಾಂತರಿಸಲಿದ್ದಾರೆ.
ಪತ್ರದಲ್ಲಿ ಪ್ರಧಾನಿ ನವಾಝ್ ಶರೀಫ್ ಅವರು ಅಣುಶಕ್ತಿ ಪ್ರಸರಣ ತಡೆ ಒಪ್ಪಂದಕ್ಕೆ ಸಹಿಹಾಕದ ದೇಶಗಳಿಗೆ ಎನ್‌ಎಸ್‌ಜಿ ಸದಸ್ಯತ್ವ ನೀಡಿಕೆಯಲ್ಲಿ ತಾರತಮ್ಯರಹಿತ ನೀತಿಯನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದ್ದಾರೆಂದು ವಿದೇಶಾಂಗ ಇಲಾಖೆ ತಿಳಿಸಿದೆ. ಪರಮಾಣು ಪೂರೈಕೆದಾರರ ಗುಂಪಿಗೆ ಪ್ರವೇಶವನ್ನು ಪಡೆಯುವ ತನ್ನ ಪ್ರಯತ್ನದಲ್ಲಿ ಪಾಕಿಸ್ತಾನವು ಕಠಿಣ ಸವಾಲನ್ನು ಎದುರಿಸುತ್ತಿದೆ. ಭಾರತಕ್ಕೆ ಎನ್‌ಎಸ್‌ಜಿ ಸದಸ್ಯತ್ವ ನೀಡುವುದಕ್ಕೆ ಅಮೆರಿಕ ಬೆಂಬಲ ವ್ಯಕ್ತಪಡಿಸಿದೆ.







