ಸಚಿವ ಮಹದೇವಪ್ಪ ಪುತ್ರ ಸುನೀಲ್ ಬೋಸ್‌ರಿಂದ ಅರ್ಜಿ ವಾಪಸ್
ಮರಳು ಗಣಿಗಾರಿಕೆಗೆ ಸಹಕರಿಸಲು ಲಂಚ ಸ್ವೀಕಾರ ಪ್ರಕರಣ
ಬೆಂಗಳೂರು, ಆ.23: ಮರಳು ಗಣಿಗಾರಿಕೆಗೆ ಸಹಕರಿಸಲು ಲಂಚ ಸ್ವೀಕರಿಸುವಂತೆ ಭೂ ವಿಜ್ಞಾನಿಗೆ ಒತ್ತಾಯಿಸಿರುವ ಆರೋಪದಲ್ಲಿ ಖುದ್ದು ಹಾಜರಿಗೆ ಮೈಸೂರು ಲೋಕಾಯುಕ್ತ ಕೋರ್ಟ್ ಜಾರಿ ಮಾಡಿದ್ದ ಶೋಕಾಸ್ ನೋಟಿಸ್ ಪ್ರಶ್ನಿಸಿ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪಪುತ್ರ ಸುನೀಲ್ ಬೋಸ್ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದಿದ್ದಾರೆ.
ಶೋಕಾಸ್ ನೋಟಿಸ್ ಜಾರಿಗೆ ಸಂಬಂಧಿಸಿದಂತೆ ವಿಚಾರಣೆಗಾಗಿ ಅಧೀನ ನ್ಯಾಯಾಲಯಕ್ಕೆ ಹಾಜರಾಗಿದ್ದು, ವಿಚಾರಣೆ ಎದುರಿಸಲಾಗಿದೆ. ಈ ಸಂಬಂಧ ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಾಲಯ ಆದೇಶ ಕಾಯ್ದಿರಿಸಿದೆ. ಹೀಗಾಗಿ, ಅರ್ಜಿ ಹಿಂಪಡೆಯುವುದಾಗಿ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ನ್ಯಾ.ಆನಂದಭೈರಾರೆಡ್ಡಿ ಅವರಿದ್ದ ನ್ಯಾಯಪೀಠಕ್ಕೆ ಮನವಿ ಮಾಡಿದರು. ಮನವಿ ಪುರಸ್ಕರಿಸಿದ ನ್ಯಾಯಪೀಠ ಅರ್ಜಿ ವಜಾಗೊಳಿಸಿತು. ಪ್ರಕರಣದ ಹಿನ್ನೆಲೆ: 200 ಲಾರಿ ಲೋಡ್ ಮರಳು ಸಾಗಣೆಗೆ ಅನುಮತಿ ನೀಡಲು ತಿ.ನರಸೀಪುರ ತಾಲೂಕಿನ ಬಸವರಾಜು ಎಂಬವರಿಂದ ಒಂದು ಲಕ್ಷ ರೂ. ಲಂಚ ಸ್ವೀಕರಿಸುವ ಸಂದರ್ಭದಲ್ಲಿ ಮೈಸೂರು ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ವಿ.ಜೆ.ಅಲ್ಫೋನ್ಸ್ ಮನೆ ಮೇಲೆ ಲೋಕಾಯುಕ್ತ ಪೊಲೀಸರು 2010ರ ಮಾ.25ರಂದು ದಾಳಿ ನಡೆಸಿದ್ದರು.
ಪೊಲೀಸರ ವಿಚಾರಣೆ ವೇಳೆ ಲಂಚ ಪಡೆಯುವಂತೆ 2010ರಲ್ಲಿ ಶಾಸಕರಾಗಿದ್ದ ಮಹದೇವಪ್ಪ ಪುತ್ರ ಸುನೀಲ್ ಬೋಸ್ ತಮಗೆ ಒತ್ತಾಯಿಸಿರುವುದಾಗಿ ಹೇಳಿಕೆ ನೀಡಿದ್ದರು. ಆದರೆ ಸುನೀಲ್ ಬೋಸ್ ಸರಕಾರಿ ನೌಕರರಲ್ಲದ ಕಾರಣ ಅವರ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಿಸಲು ಅವಕಾಶವಿಲ್ಲ ಎಂದು ಲೋಕಾಯುಕ್ತ ಪೊಲೀಸರು, 2013ರಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ದೋಷಾರೋಪ ಪಟ್ಟಿಯಲ್ಲಿ ಸುನೀಲ್ ಬೋಸ್ ಹೆಸರನ್ನು ಕೈ ಬಿಟ್ಟಿದ್ದರು.
ದೂರುದಾರ ಬಸವರಾಜು ಇದನ್ನು ಮೈಸೂರಿನ ಲೋಕಾಯುಕ್ತ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಅವರ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ, 2016ರ ಜುಲೈ 17ರಂದು ವಿಚಾರಣೆಗೆ ಖುದ್ದು ಹಾಜರಾಗುವಂತೆ ಸೂಚಿಸಿ ಸುನಿಲ್ ಬೋಸ್‌ಗೆ ನೋಟಿಸ್ ಜಾರಿ ಮಾಡಿತ್ತು. ಈ ನೋಟಿಸ್ ಪ್ರಶ್ನಿಸಿ ಸುನೀಲ್ ಬೋಸ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.





