ವರ ಮುಚ್ಚಿಟ್ಟ ಎಚ್ ಐ ವಿ ಗುಟ್ಟು ರಟ್ಟು, ಜಿಲ್ಲಾಡಳಿತದ ನೆರವಿನಿಂದ ಮದುವೆ ರದ್ದು

ತಿರುನಲ್ವೇಲಿ, ಆ.24: ವರನಿಗೆ ಎಚ್‌ಐವಿ ಇರುವ ಬಗ್ಗೆ ಮುಚ್ಚಿಟ್ಟಿದ್ದ ಗುಟ್ಟು ರಟ್ಟಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಮಧ್ಯಸ್ಥಿಕೆಯಲ್ಲಿ ವಧುವಿನ ಕಡೆಯವರು ವಿವಾಹವನ್ನು ರದ್ದು ಮಾಡಿದ ಅಪರೂಪದ ಘಟನೆ ನಡೆದಿದೆ.
ಘಟನೆ ಬೆಳಕಿಗೆ ಬಂದದ್ದು ಹೀಗೆ. ವರನ ಸಂಬಂಧಿಕರು ಹಾಗೂ ಸ್ನೇಹಿತರು ಮದುವೆ ಹಾಲ್‌ನಲ್ಲಿ ಮದುವೆ ಬ್ಯಾನರ್ ಹಾಕಿದ್ದರು. ಈ ಬ್ಯಾನರ್ ನೋಡಿದ ಕೆಲವರು ಜಿಲ್ಲಾಧಿಕಾರಿ ಎಸ್.ಪಳನಿ ಅವರಿಗೆ ರವಿವಾರ ರಾತ್ರಿ ಕರೆ ಮಾಡಿ ವರನಿಗೆ ಎಚ್‌ಐವಿ ಸೋಂಕು ಇರುವುದನ್ನು ಗಮನಕ್ಕೆ ತಂದರು.
"ಈ ದೂರವಾಣಿ ಮಾಹಿತಿ ರಾತ್ರಿ 9:30ರ ವೇಳೆಗೆ ಬಂತು. ತಕ್ಷಣ ಎಸ್ಪಿ ಹಾಗೂ ವೈದ್ಯಕೀಯ ಸೇವೆಗಳ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಿ, ಇದನ್ನು ದೃಢಪಡಿಸುವಂತೆ ಆದೇಶಿಸಿದೆ. ವರನ ಕಡೆಯವರನ್ನು ಪತ್ತೆ ಮಾಡಿ ವಿಷಯ ತಿಳಿಸುವಂತೆ ಕಂದಾಯ ಅಧಿಕಾರಿಗಳಿಗೆ ಸೂಚಿಸಲಾಗಿತ್ತು" ಎಂದು ಜಿಲ್ಲಾಧಿಕಾರಿ ಘಟನೆ ವಿವರ ನೀಡಿದರು.
ಅಧಿಕಾರಿಗಳು ಸರಕಾರಿ ಆಸ್ಪತ್ರೆಯ ಸಮಗ್ರ ಸಲಹಾ ಕೇಂದ್ರ ಹಾಗೂ ತಪಾಸಣಾ ಕೇಂದ್ರದ ದಾಖಲೆಗಳನ್ನು ಪರಿಶೀಲಿಸಿದಾಗ, 2014ರ ಜುಲೈ 30ರಿಂದ ಈತ ಎಚ್‌ಐವಿ ಚಿಕಿತ್ಸೆ ಪಡೆಯುತ್ತಿರುವುದು ದೃಢಪಟ್ಟಿತು. ಮರುದಿನ ಬೆಳಗ್ಗೆ ಈ ವೈದ್ಯಕೀಯ ದಾಖಲೆಗಳು ಕೈಸೇರಿದವು. ಅದರಲ್ಲಿ ಇದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿ, ಗಂಟೆಯ ಒಳಗಾಗಿ ಬಂದು ಭೇಟಿ ಮಾಡುವಂತೆ ಸೂಚಿಸಿದೆವು. ಆದರೆ ಅವರು ಬರಲಿಲ್ಲ. ಈ ಮಧ್ಯೆ ವರನ ಸಹೋದರಿಯ ದೂರವಾಣಿ ಸಂಖ್ಯೆ ಪಡೆದು ಮಾಹಿತಿ ನೀಡಲಾಯಿತು. ಆಕೆ ಅದನ್ನು ನಂಬಲಿಲ್ಲ. ವಧುವಿನ ಕಡೆಯವರಿಗೆ ಕರೆ ಮಾಡಿದಾಗ, "ವಿರೋಧ ಪಕ್ಷದ ಕಾರ್ಯಕರ್ತರು ಈ ವದಂತಿ ಹಬ್ಬಿಸಿ ಮದುವೆ ತಪ್ಪಿಸಲು ಹೊರಟಿದ್ದಾರೆ ಎಂದು ವರನ ಕಡೆಯವರು ಹೇಳಿರುವುದು ತಿಳಿಯಿತು. ತಕ್ಷಣ ವಿವಾಹ ಸ್ಥಳಕ್ಕೆ ಧಾವಿಸಿ ಮದುವೆ ನಿಲ್ಲಿಸಿದೆವು ಎಂದು ತಹಶೀಲ್ದಾರ್ ಚೆಂಗಂ ಎಂ.ಕಾಮರಾಜ್ ವಿವರಿಸಿದರು.
ವಧುವಿಗೆ ಪರಿಸ್ಥಿತಿ ವಿವರಿಸಿದಾಗ, ಆಕೆ ವಿವಾಹ ರದ್ದು ಮಾಡಲು ಒಪ್ಪಿಕೊಂಡಳು. ವಧುವಿನ ಕಡೆಯವರು ಗ್ರಾಮಕ್ಕೆ ತೆರಳಲು ಪೊಲೀಸ್ ರಕ್ಷಣೆ ಕೋರಿದ್ದು, ವಧುವಿಗೆ ಸಂಬಂಧಿ ಯುವಕನೊಬ್ಬನ ಜತೆ ವಿವಾಹ ನಡೆಸಲಾಯಿತು.







