ಫ್ರಾನ್ಸ್ ದೇಶದ ನೈಸ್ ಬೀಚ್‌ನಲ್ಲಿ ಬುರ್ಕಿನಿ ತೆಗೆಯುವಂತೆ ಮುಸ್ಲಿಂ ಮಹಿಳೆಯನ್ನು ಬಲವಂತಪಡಿಸಿದ ಪೊಲೀಸರು

ನೈಸ್, ಆ.24: ಇಸ್ಲಾಮಿಕ್ ವಸ್ತ್ರಸಂಹಿತೆಗೆ ಅನುಗುಣವಾಗಿ ಮುಸ್ಲಿಂ ಮಹಿಳೆಯರು ಧರಿಸುವ ಸ್ವಿಮ್‌ಸೂಟ್ ಬುರ್ಕಿನಿ ಈಗ ಫ್ರಾನ್ಸ್ ದೇಶದಲ್ಲಿ ವಿವಾದಕ್ಕೆ ಕಾರಣವಾಗಿದೆ. ಇತ್ತೀಚೆಗೆ ನೈಸ್ ನಗರದ ಬೀಚ್‌ನಲ್ಲಿದ್ದ ಮುಸ್ಲಿಮ್ ಮಹಿಳೆಯೊಬ್ಬರು ಧರಿಸಿದ್ದ ಬುರ್ಕಿನಿಯನ್ನು ತೆಗೆಯುವಂತೆ ಬಲವಂತಪಡಿಸಲಾಗಿತ್ತು ಎಂದು ದಿ ಗಾರ್ಡಿಯನ್ ವರದಿ ತಿಳಿಸಿದೆಯೆಂದು ಖಲೀಜ್ ಟೈಮ್ಸ್ ವರದಿ ಮಾಡಿದೆ.
ಬುರ್ಕಿನಿ ಧರಿಸಿದ್ದ ಮಹಿಳೆಗೆ ಅದನ್ನು ತೆಗೆದು ಹಾಕುವಂತೆ ಕನಿಷ್ಠ ನಾಲ್ಕು ಮಂದಿ ಪೊಲೀಸರು ಬಲವಂತ ಪಡಿಸುತ್ತಿರುವ ಫೊಟೋಗಳು ಬಹಿರಂಗ ಗೊಂಡಿದ್ದು, ಈ ಘಟನೆ ಕಳೆದ ತಿಂಗಳು ಟ್ರಕ್ ದಾಳಿಗೊಳಗಾದ ಪ್ರೊಮೆನೇಡ್ ಡೆಸ್ ಆಂಗ್ಲಲ್ಸ್ ಪ್ರದೇಶದಲ್ಲಿರುವ ಬೀಚ್‌ನಲ್ಲಿ ನಡೆದಿದೆ. ಪೊಲೀಸರ ಬಲವಂತದ ಮೇರೆಗೆ ಮಹಿಳೆ ತನ್ನ ನೀಲಿ ಬಣ್ಣದ ಮೇಲಂಗಿ ತೆಗೆಯುವ ಫೋಟೋ ಕೂಡ ಬಹಿರಂಗಗೊಂಡಿದೆ.
ತಾನು ಲೆಗ್ಗಿಂಗ್ಸ್, ಟ್ಯುನಿಕ್ ಹಾಗೂ ಶಿರವಸ್ತ್ರವನ್ನು ಧರಿಸಿ ಕೇನ್ಸ್ ನ ರೆಸಾರ್ಟ್ ಒಂದರಲ್ಲಿದ್ದಾಗ ಪೊಲೀಸರು ತನಗೆ ದಂಡ ವಿಧಿಸಿದ್ದಾರೆಂದು ಆಕೆ ಹೇಳಿದ್ದಾಳಲ್ಲದೆ ತನಗೆ ಈಜಾಡುವ ಉದ್ದೇಶವಿರಲಿಲ್ಲವೆಂದೂ ಸ್ಲಾಮ್ ಎಂಬ ಹೆಸರಿನ ಆ 34 ವರ್ಷದ ಮಹಿಳೆ ಹೇಳಿದ್ದಾಳೆ. ಹತ್ತಿರದಲ್ಲೇ ಇದ್ದ ಈ ಮಹಿಳೆಯ ಸಂಬಂಧಿಯೊಬ್ಬರು ಘಟನೆಯ ಬಗ್ಗೆ ವಿವರಿಸುತ್ತಾ ‘‘ಅಲ್ಲಿದ್ದ ಜನರು ಮನೆಗೆ ಹೋಗು ಎಂದು ಬೊಬ್ಬೆ ಹೊಡೆಯುತ್ತಿರುವುದು ಕೇಳಿ ಬೇಸರವಾಯಿತು. ಕೆಲವರು ಪೊಲೀಸರ ಕ್ರಮವನ್ನು ಪ್ರಶಂಸಿಸುತ್ತಿದ್ದರು. ಆಕೆಯ ಪುತ್ರಿ ಅಳುತ್ತಿದ್ದಳು’’ಎಂದು ಹೇಳಿದ್ದಾರೆ.
ಬುರ್ಕಿನಿ ಸ್ವಿಮ್ ಸೂಟ್ ಅನ್ನು ನಿಷೇಧಗೊಳಿಸಿರುವ ಹಲವಾರು ಫ್ರೆಂಚ್ ಪಟ್ಟಣಗಳ ಕ್ರಮವು ಗುರುವಾರದಂದು ಫ್ರಾನ್ಸ್ ದೇಶದ ಅತ್ಯುನ್ನತ ಆಡಳಿತಾತ್ಮಕ ನ್ಯಾಯಾಲಯದ ಮುಂದೆ ಬರಲಿದೆ. ನೈಸ್ ನ ರಿವೇರಾ ನಗರದಲ್ಲಿನ ನ್ಯಾಯಾಲಯವೊಂದು ವಿಲ್ಲೆನ್ಯೂವೆ -ಲೋಬೆಟ್ ನಗರದಲ್ಲಿ ಸಂಪೂರ್ಣ ದೇಹವನ್ನು ಮುಚ್ಚುವ ಬುರ್ಕಿನಿ ಸ್ವಿಮ್ ಸೂಟ್ ಮೇಲೆ ಹೇರಿದ್ದ ನಿಷೇಧವನ್ನು ಹ್ಯೂಮನ್ ರೈಟ್ಸ್ ಲೀಗ್ ಪ್ರಶ್ನಿಸಿ ಅಪೀಲು ಸಲ್ಲಿಸಿದೆ.







