ಎಲ್ಲಾ ಆಯಾಮಗಳಲ್ಲಿ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ತನಿಖೆ: ಸಿಐಡಿ ಎಡಿಜಿಪಿ

ಉಡುಪಿ, ಆ.24: ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ತನಿಖೆಯನ್ನು ಈಗಾಗಲೇ ಸಿಐಡಿ ತಂಡ ವಹಿಸಿಕೊಂಡಿದ್ದು, ಪ್ರಕರಣವನ್ನು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಿ ಆದಷ್ಟು ಬೇಗ ಒಂದು ನಿರ್ಣಯ ಹಂತಕ್ಕೆ ಬರಲಾಗುವುದು ಎಂದು ಸಿಐಡಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರತಾಪ್ ರೆಡ್ಡಿ ಹೇಳಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಇಂದು ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ತನಿಖಾಧಿಕಾರಿಗಳ ನೇತೃತ್ವದಲ್ಲಿ 8-10 ಸಿಐಡಿ ಅಧಿಕಾರಿಗಳ ತಂಡವು ಉಡುಪಿಯಲ್ಲಿ ಬೀಡುಬಿಟ್ಟು ತನಿಖೆ ಮುಂದುವರಿಸುತ್ತಿದೆ. ಈ ವಿಚಾರದಲ್ಲಿ ನಾವು ಈಗಲೇ ಎಲ್ಲವನ್ನು ಹೇಳಲು ಬಯಸುವುದಿಲ್ಲ ಎಂದರು.
ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ತನಿಖೆ ಪ್ರಾರಂಭಿಕ ಹಂತದಲ್ಲಿದ್ದು, ಆರೋಪಿಗಳ ಕೆಲವು ದಿನಗಳ ಪೊಲೀಸ್ ಕಸ್ಟಡಿ ಈಗಾಗಲೇ ಮುಗಿದಿದ್ದು, ಮುಂದೆ ಸಮಯಾವಕಾಶಗಳನ್ನು ನೋಡಿಕೊಂಡು ಅಗತ್ಯ ಬಿದ್ದರೆ ನ್ಯಾಯಾಲಯದ ಮೊರೆ ಹೋಗಿ ಅವರನ್ನು ಮತ್ತೆ ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಬೇರೆ ಆರೋಪಿಗಳು ಇದರಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಪ್ರಶ್ನೆಗೆ, ಇದರಲ್ಲಿ ಯಾರೆಲ್ಲ ಆರೋಪಿಗಳು ಭಾಗಿಯಾಗಿದ್ದಾರೆ ಎಂಬುದನ್ನು ಕೂಡ ತನಿಖೆ ಮಾಡುತ್ತೇವೆ. ಆದರೆ ಅದನ್ನು ಈಗಲೇ ಹೇಳಿದರೆ ತಪ್ಪಾಗುತ್ತದೆ. ತನಿಖೆಯನ್ನು ಸಂಪೂರ್ಣಗೊಳಿಸಿದ ಬಳಿಕವಷ್ಟೆ ಈ ವಿಚಾರಗಳು ತಿಳಿದು ಬರಬೇಕಾಗಿದೆ. ಪ್ರತಿಯೊಂದನ್ನು ಕೂಡ ನಾವು ಪರಿಶೀಲನೆ ಮಾಡುತ್ತಿದ್ದೇವೆ. ಮುಂದೆ ನ್ಯಾಯಾಲಯಕ್ಕೆ ವರದಿಯನ್ನು ಸಮರ್ಪಿಸಿದಾಗ ಎಲ್ಲವೂ ಗೊತ್ತಾ ಗುತ್ತದೆ ಎಂದರು.
ಸ್ಥಳೀಯ ಪೊಲೀಸರ ಅಸಮರ್ಪಕ ತನಿಖೆಯ ಬಗ್ಗೆ ಈಗಲೇ ಏನೂ ಹೇಳಲು ಆಗಲ್ಲ. ನಾವು ಪ್ರಕರಣದ ಪ್ರತಿಯೊಂದು ಹೆಜ್ಜೆಯನ್ನು ಕೂಡ ಪರಿಶೀಲನೆ ಮಾಡುತ್ತೇವೆ ಎಂದು ಎಡಿಜಿಪಿ ಪ್ರತಾಪ್ ರೆಡ್ಡಿ ತಿಳಿಸಿದರು.







