ರೋಹಿತ್ ವೇಮುಲಾ ದಲಿತ ಅಲ್ಲ: ವರದಿ

ಹೊಸದಿಲ್ಲಿ,ಆಗಸ್ಟ್ 24: ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ಆತ್ಮಹತ್ಯೆ ಮಾಡಿರುವ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ದಲಿತ ವಿಭಾಗದವರಲ್ಲ ಎಂದು ನ್ಯಾಯಾಂಗ ಆಯೋಗದ ವರದಿ ವಿವರಿಸಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿಸಚಿವಾಲಯ ನೇಮಿಸಿದ ಏಕ ಸದಸ್ಯ ಆಯೋಗದ ತನಿಖಾ ವರದಿಯಲ್ಲಿ ಈ ಅಂಶ ವಿವರಿಸಲಾಗಿದ್ದು, ಅಲಹಾಬಾದ್‌ನ ನಿವೃತ್ತ ನ್ಯಾಯಾಧೀಶ ಎ.ಕೆ ರೂಪನ್‌ವಾಲ್‌ರ ಏಕಸದಸ್ಯ ಆಯೋಗದ ಈ ವರದಿ ತಯಾರಿಸಿದೆ ಎಂದು ವರದಿಯಾಗಿದೆ.
ಆಗಸ್ಟ್ ಮೊದಲ ವಾರದಲ್ಲಿ ವಿಶ್ವ ವಿದ್ಯಾನಿಲಯ ಅನುದಾನ ಆಯೋಗಕ್ಕೆ (ಯು.ಜಿ.ಸಿ) ಎ.ಕೆ.ರೂಪನ್‌ವಾಲ್ ವರದಿ ಸಲ್ಲಿಸಿದ್ದಾರೆ. ರೋಹಿತ್ ವೇಮುಲಾ ದಲಿತ ವಿಭಾಗದ ವ್ಯಕ್ತಿಯಲ್ಲ ಮತ್ತು ಆತನ ಆತ್ಮಹತ್ಯೆಯಲ್ಲಿ ವಿಶ್ವವಿದ್ಯಾನಿಲಯದ ಉಪಕುಲಪತಿ ಪಿ.ಅಪ್ಪಾರಾವ್‌ರ ಪಾತ್ರವಿಲ್ಲ ಎಂದು ವರದಿ ತಿಳಿಸಿದೆ. ಇದು ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ವರದಿಗೆ ತದ್ವಿರುದ್ಧವಾಗಿದೆ. ಆದರೆ ಆಯೋಗ ವರದಿ ಸಲ್ಲಿಸಿರುವ ವಿಚಾರವನ್ನು ಮಾನವ ಸಂಪನ್ಮೂಲ ಸಚಿವಾಲಯ ಇನ್ನೂ ದೃಢೀಕರಿಸಿಲ್ಲ ಎಂದು ವರದಿ ತಿಳಿಸಿದೆ.
ರೋಹಿತ್ ವೇಮುಲಾ ಆತ್ಮಹತ್ಯೆ ದಲಿತ ವಿಷಯವಾಗಿ ಉರಿಯತೊಡಗಿದಾಗ ಕೇಂದ್ರ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವಾಲಯ ಏಕಸದಸ್ಯ ಆಯೋಗವನ್ನು ತನಿಖೆಗಾಗಿ ರಚಿಸಿತ್ತು ಹೈದರಾಬಾದ್ ವಿಶ್ವವಿದ್ಯಾನಿಲಯದ ಉಪಕುಲಪತಿ ಅಪ್ಪರಾವ್ ಮತ್ತು ಕೇಂದ್ರ ಸಚಿವ ಬಂಡಾರು ದತ್ತಾತ್ರೇಯರ ವಿರುದ್ಧ ಪರಿಶಿಷ್ಟಜಾತಿ ದೌರ್ಜನ್ಯ ತಡೆಕಾಯಿದೆ ಪ್ರಕಾರ ಮೊಕದ್ದಮೆ ದಾಖಲಾಗಿತ್ತು. ಆದರೆ ಗುಂಟೂರು ಜಿಲಾಧಿಕಾರಿ ರಾಷ್ಟ್ರೀಯ ಪರಿಶಿಷ್ಟಜಾತಿ ಆಯೋಗಕ್ಕೆ ನೀಡಿದ್ದ ವರದಿಯಲ್ಲಿ ರೋಹಿತ್ ವೇಮುಲಾ ದಲಿತವ್ಯಕ್ತಿಯೆಂದು ತಿಳಿಸಿರುವುದರಿಂದಾಗಿ ಏಕಸದಸ್ಯ ಆಯೋಗದ ವರದಿ ಪ್ರಕರಣದ ಮೇಲೆ ಯಾವ ಪರಿಣಾಮವನ್ನೂ ಬೀರಲಾರದು ಎಂದು ವರದಿ ತಿಳಿಸಿದೆ.







