ನರಿಂಗಾನ: ಮೋರ್ಲ-ಮೀನಂಕೋಡಿ ಕಿರು ಸೇತುವೆ ಉದ್ಘಾಟನೆ
ಕೊಣಾಜೆ, ಆ.24: ಜನರಿಗೆ ಅಗತ್ಯವಿರುವ ಬೇಡಿಕೆಗಳನ್ನು ಪೂರೈಸುವ ಕಾರ್ಯ ಹಂತ ಹಂತವಾಗಿ ಮಾಡಲಾಗುತ್ತಿದೆ. ರಸ್ತೆ, ನೀರಿನ ಸಮಸ್ಯೆಗಳನ್ನು ಬಗೆಹರಿಸುವ ಕಡೆ ಹೆಚ್ಚಿನ ಗಮನ ನೀಡುತ್ತಿದ್ದು, ಕ್ಷೇತ್ರದ ಎಲ್ಲಾ ಜನರ ಸಲಹೆ ಸಹಕಾರ ಅಗತ್ಯ ಎಂದು ಆಹಾರ ಸಚಿವ ಯು.ಟಿ ಖಾದರ್ ಹೇಳಿದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅನುದಾನದಲ್ಲಿ ನಿರ್ಮಾಣಗೊಂಡ ನರಿಂಗಾನ ಗ್ರಾಮದ ಮೀನಂಕೋಡಿ-ಮೋರ್ಲ ಸಂಪರ್ಕದ ನೂತನ ಕಿರು ಸೇತುವೆಯ ಉದ್ಘಾಟನಾ ಕಾರ್ಯಕ್ರದಲ್ಲಿ ಅವರು ಮಾತನಾಡಿದರು. .
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಿವೇದಿತ್ ಆಳ್ವ ಮಾತನಾಡಿ, ಸುಮಾರು 21 ತಿಂಗಳ ಕಾಲದ ಅಧಿಕಾರಾವಧಿಯಲ್ಲಿ 19 ವಿಧಾನಸಭಾ ಕ್ಷೇತ್ರದಲ್ಲಿ 25 ಕೋಟಿ ರೂ. ಅನುದಾನ ವ್ಯಯಿಸಿ ಗುಣಮಟ್ಟದ ಕಾಮಗಾರಿ ನಡೆಸಲಾಗಿದೆ. ತನ್ನ ಅಧಿಕಾರಾವಧಿಯಲ್ಲಿ ವ್ಯಾಪ್ತಿಗೆ ಬರುವ 19 ಕ್ಷೇತ್ರಗಳಲ್ಲಿ 25 ಕೋಟಿ ರೂ.ನಷ್ಟು ಅನುದಾನ ವ್ಯಯಿಸಿ ಎಷ್ಟೇ ದೂರವಾದರೂ ಅಲ್ಲಿಗೆ ತೆರಳಿ ಕಾಮಗಾರಿಯನ್ನು ಪರೀಕ್ಷಿಸಿ ಗುಣಮಟ್ಟದ ಕೆಲಸ ನಡೆಸಿದುದರ ಬಗ್ಗೆ ಸಮಾಧಾನ ವ್ಯಕ್ತಪಡಿಸಿದರು.
ಮಂಗಳೂರು ವಿದಾನಸಭಾ ಕ್ಷೇತ್ರದ ನರಿಂಗಾನ ಗ್ರಾಮದ ಜನರ ಹಲವು ವರುಷಗಳ ಬೇಡಿಕೆಯ ಕಿರು ಸೇತುವೆಗೆ ಅನುದಾನ ಒದಗಿಸಿ ಕೊಟ್ಟಿದ್ದು ಕ್ಷೇತ್ರದ ಶಾಸಕ ಸಚಿವ ಯು.ಟಿ ಖಾದರ್ ಅವರ ಮಾರ್ಗದರ್ಶನ ಸಹಕಾರದಿಂದ ಕಾಮಗಾರಿ ಯಶಸ್ವಿಯಾಗಿದೆ ಎಂದು ಹೇಳಿದರು. ನನ್ನ ಅಧಿಕಾರಾವಧಿ ಮುಗಿದಿದ್ದು ನಿರ್ಗಮಿಸುವ ಮುನ್ನ ಸೇತುವೆಯನ್ನು ಲೋಕಾರ್ಪಣೆಗೈಯಬೇಕೆಂಬ ಕನಸು ನನಸಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ನರಿಂಗಾನ ಪಂಚಾಯತ್‌ನ ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ, ಮಾಜಿ ಅಧ್ಯಕ್ಷ ಸಿದ್ಧೀಕ್ ಪಾರೆ, ಕುರ್ನಾಡು ಜಿಲ್ಲಾ ಪಂಚಾಯತ್ ಕ್ಷೇತ್ರ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ, ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ಕುರ್ನಾಡು ಪಂಚಾಯತ್ ಮಾಜಿ ಅಧ್ಯಕ್ಷ ಪ್ರಶಾಂತ್ ಕಾಜವ, ಗ್ರಾ.ಪಂ ಸದಸ್ಯ ಮುರಳೀಧರ ಮೋರ್ಲ, ಮುಖಂಡರಾದ ಉಮ್ಮರ್ ಪಜೀರು ಉಪಸ್ಥಿತರಿದ್ದರು.





.jpg.jpg)



