ಕಾಣೆಯಾಗಿರುವ ಹುಲಿ ‘ಜೈ’ ಪತ್ತೆಕಾರ್ಯ ಸಿಬಿಐಗೆ ವಹಿಸಲು ಆಗ್ರಹ

ಮುಂಬೈ,ಆ.24: ಕಳೆದ ಎಪ್ರಿಲ್‌ನಿಂದ ಕಾಣೆಯಾಗಿರುವ ಎಲ್ಲರ ಅಕ್ಕರೆಯ ಹುಲಿ ‘ಜೈ’ ಅನ್ನು ಪತ್ತೆಹಚ್ಚುವ ಜವಾಬ್ದಾರಿಯನ್ನು ಸಿಬಿಐಗೆ ವಹಿಸಬೇಕು ಎಂದು ಬುಧವಾರ ಇಲ್ಲಿ ಹೇಳಿದ ರಾಜ್ಯದ ಅರಣ್ಯ ಸಚಿವ ಸುಧೀರ ಮುಂಗಂಟಿವಾರ್ ಅವರು,ಸಿಬಿಐ ತನಿಖೆಗೆ ಆಗ್ರಹಿಸಿ ಶೀಘ್ರವೇ ತಾನು ಪ್ರಧಾನಿಯವರಿಗೆ ಪತ್ರವನ್ನು ಬರೆಯುವುದಾಗಿ ತಿಳಿಸಿದರು.
250 ಕೆಜಿ ತೂಗುವ ಜೈ ಪತ್ತೆಗಾಗಿ ನಡೆಸಿದ ಭಾರೀ ಶೋಧ ಕಾರ್ಯಾರಣೆ ವಿಫಲಗೊಂಡಿದೆ.
ಗಲ್ಲಾ ಪೆಟ್ಟಿಗೆಯನ್ನು ಕೊಳ್ಳೆ ಹೊಡೆದಿದ್ದ ಶೋಲೆ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಅವರು ವಹಿಸಿದ್ದ ಪಾತ್ರದ ಹೆಸರು ಹೊಂದಿರುವ ಏಳು ವರ್ಷ ಪ್ರಾಯದ ಈ ಹುಲಿ ಮೂರು ವರ್ಷಗಳ ಹಿಂದೆ ಸೂಕ್ತ ಸಂಗಾತಿಯನ್ನು ಕಂಡುಕೊಳ್ಳಲು ಗ್ರಾಮಗಳು,ನದಿಗಳು ಮತ್ತು ಅಪಾಯಕಾರಿಯಾದ ರಾಷ್ಟ್ರೀಯ ಹೆದ್ದಾರಿಗಳ ಮೂಲಕ ಯಶಸ್ವಿ ‘ಚೈತ್ರಯಾತ್ರೆ’ಯನ್ನು ಕೈಗೊಳ್ಳುವ ಮೂಲಕ ರಾಷ್ಟ್ರಾದ್ಯಂತ ಪ್ರಸಿದ್ಧಿಗೆ ಬಂದಿತ್ತು.
ಪ್ರವಾಸಿಗಳು ಮತ್ತು ಅರಣ್ಯ ಸಂರಕ್ಷಕರ ಅಚ್ಚುಮೆಚ್ಚಿನ ಹುಲಿಯಾಗಿರುವ ಜೈ ಕೊನೆಯ ಬಾರಿಗೆ ಎ.18ರಂದು ತಾನು ಸಾಮಾನ್ಯವಾಗಿ ವಾಸಿಸುವ ಉಮ್ರೆದ್ ಕರಹಂಡ್ಲಾ ವನ್ಯಜೀವಿ ಅಭಯಾರಣ್ಯದಲ್ಲಿ ಕಂಡು ಬಂದಿತ್ತು. ಆಗಿನಿಂದಲೂ ಅದರ ಸುರಕ್ಷಿತ ವಾಪಸಾತಿಗಾಗಿ ಸ್ಥಳೀಯರು ಪ್ರಾರ್ಥನೆಗಳನ್ನು ನಡೆಸುತ್ತಿದ್ದಾರೆ.





