ಕಾರವಾರ: ಲೈಫ್‌ಲೈನ್ ಎಕ್ಸ್‌ಪ್ರೆಸ್‌ನಿಂದ ಆರೋಗ್ಯ ಸೇವೆ
ಕಾರವಾರ, ಆ.24: ಭಟ್ಕಳ ರೈಲು ನಿಲ್ದಾಣದಲ್ಲಿ ಆ.1ರಿಂದ 21ರವರೆಗೆ ಕಾರ್ಯ ನಿರ್ವಹಿಸಿದ್ದ ಹಳಿಗಳ ಮೇಲಿನ ಆಸ್ಪತ್ರೆ ಲೈಫ್‌ಲೈನ್ ಎಕ್ಸ್‌ಪ್ರೆಸ್‌ನಲ್ಲಿ ಜಿಲ್ಲೆಯ ಸಾವಿರಾರು ನಾಗರಿಕರು ಉಚಿತ ಆರೋಗ್ಯ ಸೇವೆಯನ್ನು ಪಡೆದುಕೊಂಡಿದ್ದಾರೆ.
ಲೈಫ್‌ಲೈನ್ ಎಕ್ಸ್‌ಪ್ರೆಸ್‌ನಲ್ಲಿ ಕಿವಿಗೆ ಸಂಬಂಧಿಸಿದ ರೋಗಗಳು, ಮೂರ್ಛೆ ರೋಗ, ದಂತ ಚಿಕಿತ್ಸೆ, ಹರಿದ ಅಥವಾ ಸೀಳುತುಟಿ ಚಿಕಿತ್ಸೆ, ಸುಟ್ಟ ಗಾಯಗಳಿಗೆ ಶಸ್ತ್ರಚಿಕಿತ್ಸೆ, ಪೋಲಿಯೊ ಪೀಡಿತರಿಗೆ ಸಲಕರಣೆಗಳ ವಿತರಣೆ, ಕಣ್ಣಿನ ತಪಾಸಣೆ ಇತ್ಯಾದಿ ಸೇವೆಗಳನ್ನು ಒದಗಿಸಲಾಯಿತು. ಕಣ್ಣು ತಪಾಸಣೆಗಾಗಿ ಒಟ್ಟು 2,265 ಮಂದಿ ಹೆಸರು ನೋಂದಾಯಿಸಿದ್ದರು. ಇವರ ಪೈಕಿ 1,026 ಮಂದಿಗೆ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಗಿದೆ. 889 ಮಂದಿಗೆ ಕನ್ನಡಕ ನೀಡಲಾಗಿದ್ದು, 150 ಮಂದಿಗೆ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ.
ದಂತ ಚಿಕಿತ್ಸೆಗೆ ಸಂಬಂಧಿಸಿದಂತೆ 952 ಮಂದಿ ಹೆಸರು ನೋಂದಾಯಿಸಿದ್ದು, 388 ಮಂದಿಗೆ ತಪಾಸಣೆ ಹಾಗೂ ಚಿಕಿತ್ಸೆ, 564 ಮಂದಿಗೆ ಸಂಪೂರ್ಣ ಚಿಕಿತ್ಸೆ ಒದಗಿಸಲಾಗಿದೆ. ಸುತ್ತಲಿನ ಶಾಲೆಗಳಲ್ಲಿ ಮಕ್ಕಳ ಹಲ್ಲಿನ ತಪಾಸಣೆ ನಡೆಸಿ 124 ಮಕ್ಕಳಿಗೆ ದಂತಸುರಕ್ಷಾ ಕಿಟ್‌ಗಳನ್ನು ವಿತರಿಸಲಾಗಿದೆ. ಸೀಳು ತುಟಿ ಚಿಕಿತ್ಸೆಗಾಗಿ 24 ಮಂದಿ ಹೆಸರು ನೋಂದಾಯಿಸಿದ್ದು, 3 ಮಂದಿಗೆ ಸಂಪೂರ್ಣ ಪ್ಲಾಸ್ಟಿಕ್ ಸರ್ಜರಿ ನಡೆಸಲಾಗಿದೆ. ಜಿಲ್ಲಾಡಳಿತದ ಸಹಯೋಗದೊಂದಿಗೆ ಲೈಫ್‌ಲೈನ್ ಎಕ್ಸ್‌ಪ್ರೆಸ್ ಭಟ್ಕಳದಲ್ಲಿ ಕಾರ್ಯ ನಿರ್ವಹಿಸಿದ್ದು, ತಜ್ಞ ವೈದ್ಯರು ಭಾಗವಹಿಸಿ ಸೇವೆ ಸಲ್ಲಿಸಿದ್ದರು.







