ಸರಕಾರಿ ಕಾಲೇಜಿನ ಭಾಗ್ಯಜ್ಯೋತಿ ಚಾಂಪಿಯನ್
ತಾಲೂಕು ಮಟ್ಟದ ಕ್ರೀಡಾಕೂಟ

ಚಿಕ್ಕಮಗಳೂರು, ಆ.24: ನಗರದಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಬಸವನಹಳ್ಳಿ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿನಿ ಭಾಗ್ಯಜ್ಯೋತಿ ಚಾಂಪಿಯನ್ ಆಗಿದ್ದು ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿತು.
ನಗರದ ಬಸವನಹಳ್ಳಿ ಸರಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಎಸ್‌ಡಿಎಂಸಿ ಅಧ್ಯಕ್ಷ ವರಸಿದ್ದಿವೇಣುಗೋಪಾಲ್ ಮತ್ತು ಉಪನ್ಯಾಸಕ ವೃಂದ ಅಭಿನಂದನೆ ಸಲ್ಲಿಸಿದರು.
ವಿದ್ಯಾರ್ಥಿನಿ ಭಾಗ್ಯಜ್ಯೋತಿ 3ಸಾವಿರ ಮೀ. ನಡಿಗೆ, 1,500 ಮೀ. ಓಟದಲ್ಲಿ ಪ್ರಥಮ, 3ಸಾವಿರ ಮೀ. ಹಾಗೂ ಗುಡ್ಡಗಾಡು ಓಟದಲ್ಲಿ ದ್ವಿತೀಯ, 4,100 ಮತ್ತು 4,400 ಮೀಟರ್ ರಿಲೆಯಲ್ಲಿ ದ್ವಿತೀಯ ಸ್ಥಾನ ಗಳಿಸುವ ಮೂಲಕ ವೈಯಕ್ತಿಕ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.
ಇದೇ ಕಾಲೇಜಿನ ಪೂಜಾ 800 ಮೀ. ಮತ್ತು ಗುಡ್ಡಗಾಡು ಓಟದಲ್ಲಿ ಪ್ರಥಮ, ಪ್ರತೀಕ 3 ಸಾವಿರ ಮೀ. ಓಟದಲ್ಲಿ ದ್ವಿತೀಯ ,ಆಶಾ ಗುಂಡು ಎಸೆತ ಪ್ರಥಮ,ರಶ್ಮಿ ಬರ್ಜಿ ಎಸೆತದಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಗುಂಪು ಸ್ಪರ್ಧೆಯಲ್ಲಿ ಕಬಡ್ಡಿ ಪ್ರಥಮ ಹಾಗೂ ಖೋಖೋ ದಲ್ಲಿ ದ್ವಿತೀಯ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದರು.
ಬಹುಮಾನ ವಿತರಿಸಿ ಅಭಿನಂದಿಸಿದ ವರಸಿದ್ದಿ ವೇಣುಗೋಪಾಲ್ ಮಾತನಾಡಿ, ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಬಹಳಷ್ಟು ಬಹುಮಾನಗಳಿಸಿ ಚಾಂಪಿಯನ್ನಾಗಿ ಹೊರಹೊಮ್ಮುವುದು ವಿಶೇಷವೇನಲ್ಲ , ಏಕೆಂದರೆ ಅವರಿಗೆ ಎಲ್ಲಾ ಹೈಟೆಕ್ ಸೌಲಭ್ಯಗಳನ್ನು ಮತ್ತು ನಿತ್ಯ ತರಬೇತಿ ನೀಡಿ ಪರಿಣಿತಿ ಹೊಂದಿರುವ ಕೋಚ್‌ಗಳಿಂದ ಅಭ್ಯಾಸಗಳನ್ನು ಮಾಡಿಸಿರುತ್ತಾರೆ.
ಸರಕಾರಿ ಕಾಲೇಜಿನಲ್ಲಿ ಓದುವ ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದವರಾಗಿ ಕಷ್ಟಪಟ್ಟು ವಿದ್ಯಾಭ್ಯಾಸವನ್ನು ಮಾಡಿಕೊಂಡು ಅದರ ನಡುವೆ ಸಿಗುವ ಅಲ್ಪ ಸವಲತ್ತನ್ನು ಬಳಸಿಕೊಂಡು ಆಟೋಟ ಸ್ಪರ್ಧೆಯನ್ನು ಅಭ್ಯಾಸ ಮಾಡಿ ಸಾಧನೆ ಮಾಡುತ್ತಾರೆ ಎಂದು ಮೆಚ್ಚುಗೆ ಸೂಚಿಸಿದರು.
ಭಾಗ್ಯಜ್ಯೋತಿ ವೈಯಕ್ತಿಕ ಚಾಂಪಿಯನ್ ಪಟ್ಟಗಳಿಸಿರುವುದಲ್ಲದೆ , ತಂಡವು ಗೆಲುವು ಸಾಧಿಸಿರುವುದು ಹೆಮ್ಮೆಯ ವಿಷಯ ಎಂದರು.ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಸಲುವಾಗಿ ಮುಂದೆ ಕ್ರೀಡೆಗಾಗಿ ಪ್ರತ್ಯೇಕ ನಿಧಿ ಬಳಸಿಕೊಂಡು ಹೆಚ್ಚಿನ ಅನುಕೂಲ ಕಲ್ಪಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ವಿರೂಪಾಕ್ಷ, ದಯಾನಂದ್,ನಾಗರಾಜು, ಕಿರಣ್, ಪ್ರಕಾಶ್, ಧರ್ಮಶೆಟ್ಟಿ, ಪುರುಷೋತ್ತಮ್, ಚಂದ್ರಮೌಳಿ, ಜಾನವಿ, ಲಕ್ಷ್ಮೀಕಾಂತ್, ಶಂಕರ್ ನಾಯಕ್ ,ಲೋಹಿತ್ ಸೇರಿದಂತೆ ಮತ್ತಿತರರು ಉಪಸ್ಥಿತರಿ್ದರು.







