ಪಾಕ್ ಪರ ವಿರೋಧಿಗಳ ಬದಿಗಿಟ್ಟು.....
ಪಾಕಿಸ್ತಾನದ ಪ್ರಜೆಗಳ ತಲೆಯೊಳಗೆ ಭಾರತವನ್ನು ವೈರಿರಾಷ್ಟ್ರ ಎಂಬಂತೆ ಪ್ರತಿಷ್ಠಾಪಿಸಿ ಅದರ ಲಾಭ ಪಡೆಯಲು ಹವಣಿಸಿದ ಅಲ್ಲಿನ ಆಡಳಿತವರ್ಗ ಮತ್ತು ಮೂಲಭೂತವಾದಿಗಳು,ಆ ರಾಷ್ಟ್ರವನ್ನು ಮತ್ತೆಂದೂ ಚೇತರಿಸಿಕೊಳ್ಳದಷ್ಟು ಪಾತಾಳಕ್ಕೆ ತಳ್ಳಿಬಿಟ್ಟಿದ್ದು ಈಗ ಇತಿಹಾಸ.
ಆದರೆ ಅಲ್ಲಿನ ತಳಮಟ್ಟದ ಜನ, ಕಾಲಕಳೆದಂತೆ ಇವರ ಸಂಚುಗಳನ್ನರಿತು ಸ್ವಯಂಬುದ್ಧಿಯಿಂದ ಭಾರತವನ್ನು ಸಹೋದರರಾಷ್ಟ್ರವೆಂಬಂತೆ ಕಾಣಹೊರಟ ಬಗ್ಗೆ ಇತ್ತೀಚೆಗೆ ಇಲ್ಲಿನ ಸ್ವಯಂಘೋಷಿತ ರಾಷ್ಟ್ರಭಕ್ತ ಪತ್ರಿಕೆಗಳಲ್ಲಿ ಓದಿದ ನೆನಪು. ಅದೂ ಮತಾಂಧತೆಯನ್ನೇ ಉಸಿರಾಗಿಸಿಕೊಂಡ ಲೇಖಕರು ಬರೆದಿದ್ದು. ತಮ್ಮವರೇ ಪಾಕ್ ಪರ ಸಹಾನುಭೂತಿಯ ಹೇಳಿಕೆ ನೀಡಿದ್ದರೆ, ಈಗ ಚಿತ್ರನಟಿ ಮತ್ತು ಮಾಜಿ ಸಂಸದೆಯ ಹೇಳಿಕೆಯನ್ನು ವಿರೋಧಿಸುತ್ತಿರುವವರು ಹೇಗೆ ತಲೆದೂಗುತ್ತಿದ್ದರೋ, ಅದೇ ರೀತಿ ಅಂದು ಲೇಖಕರ ಅಂಕಣಗಳಿಗೂ ದೊಡ್ಡ ಬೆಂಬಲ ದೊರೆತಿತ್ತು. ಆದರೆ ಈಗ ಹೇಳಿಕೆ ಕೊಟ್ಟಿರುವುದು ತಮ್ಮ ವಿರೋಧೀ ಬಣದ ಜನ. ಹಾಗಾಗಿ ದೇಶಭಕ್ತ(?)ರು ರೊಚ್ಚಿಗೆದ್ದಿದ್ದಾರೆ.
ಮತ್ತೆ ಕೆಲವರೊಳಗೆ, ತಮ್ಮ ಹಿತ್ತಲಿನ ಕಡೆ ದಲಿತರನ್ನು ಸುಳಿಯಬಿಡದ ಹಾಗೆಯೇ, ಪಾಕಿಸ್ತಾನದ ಮಾತೂ ಎತ್ತಬಾರದು ಎಂಬ ಮೂಢವಿಶ್ವಾಸ ತುಂಬಿಕೊಂಡಂತಿದೆ.ಇಂಥವರು ಬಹಳ ಹಿಂದಿನಿಂದಲೂ ಪಾಕ್ ರಾಜತಾಂತ್ರಿಕ ವರ್ಗ ಮತ್ತು ಮೂಲಭೂತವಾದಿಗಳು ಅಲ್ಲಿ ಅನುಸರಿಸಿಕೊಂಡು ಬಂದ ಮಾರ್ಗವನ್ನೇ ಭಾರತದಲ್ಲಿ ಪ್ರಯೋಗಿಸಲು ಮುಂದಾಗಿ ಭಾಗಶಃ ಯಶಸ್ವಿಯಾಗಿದ್ದಾರೆ ಕೂಡಾ.
ಹುಟ್ಟುವಾಗ ಎಲ್ಲ ಜನರೂ ಮುಗ್ಧರೇ, ಪರಿಸ್ಥಿತಿ, ಪೂರ್ವಾಗ್ರಹಗಳು ಅವರನ್ನು ನಂತರ ಕಟುಕರನ್ನಾಗಿ ಮಾಡುತ್ತದೆ. ಅದು ಕೆಟ್ಟ ರಾಷ್ಟ್ರವೆಂಬ ಹಣೆಪಟ್ಟಿ ಹೊತ್ತ ಪಾಕಿಸ್ತಾನದಲ್ಲಾದರೂ ಸರಿ, ಸಂಸ್ಕೃತಿಯ ತವರೂರು ಎಂದು ಕೊಂಡಾಡಲ್ಪಡುವ ನಮ್ಮ ಭಾರತದಲ್ಲಾದರೂ ಸರಿ. ಇದು ನೆನಪಲ್ಲುಳಿದರೆ, ಒಂದು ಚೂರು ಅಂತಃಕರಣವೂ ಜತೆ ಬೆರೆತರೆ ಸದಾ ಕತ್ತಲೊಳಗೆ ಕೂಡಿಡಲ್ಪಟ್ಟ ಜನರ ಬಗ್ಗೆ ಅನುಕಂಪ ಮೂಡುತ್ತದೆ. ನಾವು ಮನಸು ಮಾಡಬೇಕು ಅಷ್ಟೇ..







