ಮೂವರು ಆರೋಪಿಗಳ ಬಂಧನ
ಗುಜರಾತ್‌ನ ಪತ್ರಕರ್ತ ಕಿಶೋರ್ ದವೆ ಹತ್ಯೆ
ಅಹ್ಮದಾಬಾದ್, ಆ.24: ಗುಜರಾತ್‌ನ ಪತ್ರಕರ್ತ ಕಿಶೋರ್ ದವೆ ಎಂಬವರ ಹತ್ಯೆಯ ಸಂಬಂಧ ಮೂವರನ್ನು ಬಂಧಿಸಲಾಗಿದೆ. ದವೆಯವರನ್ನು ಸೋಮವಾರ ರಾತ್ರಿ ಅವರ ಕಚೇರಿಯಲ್ಲಿ ಇರಿದು ಕೊಲೆ ಮಾಡಲಾಗಿತ್ತು.
ಪ್ರಧಾನ ಆರೋಪಿ ಫಿರೋಝ್ ಹಾಗೂ ಸಂಜಯ ರಾಥೋಡ್ ಮತ್ತು ಆರಿಫ್ ಸಯೀದ್ ಎಂಬವರನ್ನು ಬುಧವಾರ ಬಂಧಿಸಲಾಗಿದೆ. ಅಪರಾಧ ಮಾಡಿರುವ ಕುರಿತು ಅವರು ಒಪ್ಪಿಕೊಂಡಿದ್ದಾರೆಂದು ಹಿರಿಯ ಪೊಲೀಸ್ ಅಧಿಕಾರಿ ನೀಲೇಶ್ ಜಜಾಡಿಯ ತಿಳಿಸಿದ್ದಾರೆ.
‘ಜೈಹಿಂದ್’ ಎಂಬ ಗುಜರಾತಿ ವೃತ್ತಪತ್ರಿಕೆಯ ಜುನಾಗಡ ಬ್ಯೂರೊದ ಮುಖ್ಯಸ್ಥರಾಗಿದ್ದ ದವೆಯವರನ್ನು ಸೋಮವಾರ ರಾತ್ರಿ 9ರ ವೇಳೆ ಬರವಣಿಗೆಯಲ್ಲಿ ನಿರತರಾಗಿದ್ದಾಗ ಇರಿದು ಕೊಲೆಮಾಡಲಾಗಿತ್ತು. ದಾಳಿ ನಡೆದ ವೇಳೆ ಅಲ್ಲಿ ಬೇರಾರೂ ಇರಲಿಲ್ಲ. ಅವರ ಒಂದು ಚಿಕ್ಕ ಕೊಠಡಿಯ ಕಚೇರಿಯಲ್ಲಿ ಭದ್ರತಾ ಕ್ಯಾಮರಾಗಳಿರಲಿಲ್ಲ. ಕಚೇರಿ ಸಹಾಯಕನೊಬ್ಬ ಅವರ ಮೃತದೇಹವನ್ನು ಕಂಡನೆಂದು ಪೊಲೀಸ್ ಮೂಲಗಳು ವಿವರಿಸಿವೆ.
ಫಿರೋಝ್, ದವೆಯವರ ವ್ಯಾಪಾರ ಪಾಲುದಾರನಾಗಿದ್ದನು. ಅವರಿಬ್ಬರೂ ಸಾರಿಗೆ ಉದ್ಯಮ ನಡೆಸುತ್ತಿದ್ದರು. ಕಿಶೋರ್‌ಗೆ ಸ್ವಂತ 2 ಬಸ್‌ಗಳು ಹಾಗೂ ಒಂದು ಮಿನಿ ಬಸ್ ಇದೆಯೆಂದು ಅವು ಹೇಳಿವೆ.
ಒಂದು ಬಸ್‌ನ ಮಾಲಕತ್ವವನ್ನು ತನಗೆ ವರ್ಗಾಯಿಸುವಂತೆ ಫಿರೋಝ್ ಕೆಲವು ತಿಂಗಳುಗಳಿಂದ ದವೆಯವರನ್ನು ಒತ್ತಾಯಿಸುತ್ತಿದ್ದನು. ಆದರೆ ಅದಕ್ಕೆ ಅವರು ಮೀನ ಮೇಷ ಎಣಿಸುತ್ತಿದ್ದರು. ತನಗೆ ಕಾನೂನು ವಿಚಾರದಲ್ಲಿ ದವೆ ಸಹಾಯ ಮಾಡುತ್ತಿಲ್ಲವೆಂಬ ಸಿಟ್ಟೂ ಫಿರೋಝ್‌ಗಿತ್ತೆಂದು ಜಜಾಡಿಯ ಹೇಳಿದ್ದಾರೆ.
ಸೋಮವಾರ ರಾತ್ರಿ ಫಿರೋಝ್ ಸಂಜಯ್ ಹಾಗೂ ಆರಿಫ್, ದವೆಯವರ ಕಚೇರಿಗೆ ಹೋಗಿ ಜಗಳವಾಡಿದ್ದರು.ಬಳಿಕ ಫಿರೋಝ್, ದವೆಯವರನ್ನು ಹಲವು ಬಾರಿ ತಿವಿದಿದ್ದ. ಆರೋಪಿಗಳು ಸುಟ್ಟಿದ್ದ ರಕ್ತಸಿಕ್ತ ಬಟ್ಟೆ ಪೊಲೀಸರಿಗೆ ಲಭಿಸಿದೆ. ಅವರು ಅಪಹರಿಸಿದ್ದ ದವೆಯವರ ಮೊಬೈಲ್ ಫೋನ್‌ನ ಭಾಗಗಳೂ ದೊರೆತಿವೆಯೆಂದು ಅವರು ತಿಳಿಸಿದ್ದಾರೆ.





