ವರದಿ ನೀಡುವಂತೆ ಸಚಿವ ಕಾಗೋಡು ತಿಮ್ಮಪ್ಪಸೂಚನೆ
ಮುಖ್ಯಕಾರ್ಯದರ್ಶಿ ವಿರುದ್ಧ ಭೂ ಕಬಳಿಕೆ ಆರೋಪ
ಬೆಂಗಳೂರು, ಆ.24: ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ಅರವಿಂದ ಜಾಧವ್ ವಿರುದ್ಧ ಕೇಳಿ ಬಂದಿರುವ ಸರಕಾರಿ ಭೂ ಕಬಳಿಕೆ ಆರೋಪ ಕುರಿತು ವರದಿ ನೀಡುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಮಣರೆಡ್ಡಿಗೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪಸೂಚನೆ ನೀಡಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಗೋಡು ತಿಮ್ಮಪ್ಪ, ಮುಖ್ಯಕಾರ್ಯದರ್ಶಿ ವಿರುದ್ಧದ ಭೂ ಅಕ್ರಮದ ಕುರಿತು ಮಾಧ್ಯಮಗಳಲ್ಲಿ ಬಂದಿರುವ ಸುದ್ದಿಗಳನ್ನು ಗಮನಿಸಿದ್ದೇನೆ. ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಈ ಸಂಬಂಧ ಸಂಪೂರ್ಣ ಮಾಹಿತಿಯೊಂದಿಗೆ ಬಂದು ಭೇಟಿಯಾಗುವಂತೆ ಸೂಚಿಸಿದ್ದೇನೆ ಎಂದರು.
ಅರವಿಂದಜಾಧವ್ ತಮ್ಮ ತಾಯಿಯ ಹೆಸರಿಗೆ ಭೂಮಿಯನ್ನು ಮಂಜೂರು ಮಾಡಿಸಿಕೊಂಡಿದ್ದಾರೊ ಅಥವಾ ಖರೀದಿಸಿದ್ದಾರೊ ಎಂಬುದರ ಬಗ್ಗೆ ದಾಖಲಾತಿಗಳನ್ನು ನೋಡಬೇಕು. ಮಂಗಳವಾರ ರಾತ್ರಿ ದಕ್ಷಿಣ ವಿಭಾಗದ ಕಂದಾಯ ಕಚೇರಿಯಲ್ಲಿ ದಾಖಲಾತಿಗಳನ್ನು ತಿದ್ದುವ ಪ್ರಯತ್ನ ನಡೆದಿದೆ ಎನ್ನಲಾಗಿದ್ದು, ಈ ಬಗ್ಗೆಯೂ ಪರಿಶೀಲಿಸುವುದಾಗಿ ಕಾಗೋಡು ತಿಮ್ಮಪ್ಪಹೇಳಿದರು.
Next Story





