ಇಂದಿನಿಂದ ‘ನೇತ್ರದಾನದ ಪಾಕ್ಷಿಕ’ ಆಚರಣೆ: ಡಾ.ಶಾಲಿನಿ ರಜನೀಶ್
ಬೆಂಗಳೂರು, ಆ.24: ಆರೋಗ್ಯ ಇಲಾಖೆಯು ಆ.25ರಿಂದ ಸೆಪ್ಟಂಬರ್ 8ರ ವರೆಗೆ ‘ನೇತ್ರದಾನ’ದ ಬಗ್ಗೆ ಜಾಗೃತಿ ಮೂಡಿಸಲು ಮರಣದ ನಂತರ ನೇತ್ರಗಳನ್ನು ಸುಡಬೇಡಿ, ಮಣ್ಣು ಮಾಡಬೇಡಿ-ದಾನ ಮಾಡಿ, ಅಂಧರ ಬಾಳಿಗೆ ಬೆಳಕಾಗಿ ಎಂಬ ರಾಷ್ಟ್ರೀಯ ‘ನೇತ್ರದಾನ ಪಾಕ್ಷಿಕ’ ಹಮ್ಮಿಕೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ತಿಳಿಸಿದ್ದಾರೆ.
ಬುಧವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಸುಮಾರು 1.2 ಲಕ್ಷ ಜನರು ಕಣ್ಣಿನ ಪಾರದರ್ಶಕ ಪಟಲದ (ಕಾರ್ನಿಯ) ತೊಂದರೆಯಿಂದ ಅಂಧರಾಗಿದ್ದು, ದಾನಿಗಳಿಂದ ಪಡೆದ ನೇತ್ರಗಳ ಜೋಡಣೆಯಿಂದ ಮರಳಿ ದೃಷ್ಟಿ ಬರುವಂತೆ ಮಾಡಬಹುದಾಗಿದೆ ಎಂದರು.
ದೇಶದಲ್ಲಿ ಸುಮಾರು 750 ನೇತ್ರ ಭಂಡಾರಗಳಿದ್ದು, ಪ್ರತಿವರ್ಷ 50 ಸಾವಿರದಷ್ಟು ನೇತ್ರ ಸಂಗ್ರಹಣೆಯಾಗುತ್ತಿದೆ. ರಾಜ್ಯದಲ್ಲ್ಲಿ 40 ನೇತ್ರ ಭಂಡಾರಗಳಿದ್ದು, 5,600 ನೇತ್ರ ಸಂಗ್ರಹಣಾ ಗುರಿ ಹೊಂದಿದ್ದು, 2015-16ರಲ್ಲಿ 3,572 ನೇತ್ರ ಸಂಗ್ರಹಣೆಯಾಗಿದ್ದು, ಇದುವರೆಗೆ 2050 ನೇತ್ರ ಜೋಡಣೆ ಶಸಚಿಕಿತ್ಸೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ವ್ಯಕ್ತಿಯ ಮರಣದ 6 ಗಂಟೆಯೊಳಗೆ ನೇತ್ರಗಳನ್ನು ದಾನಮಾಡಬೇಕು. ಜನರು ಇದರ ಮಹತ್ವ ಅರಿತು ತಮ್ಮ ಹತ್ತಿರದ ಸಂಬಂಗಳು, ಅಕ್ಕ-ಪಕ್ಕದವರು, ಸ್ನೇಹಿತರು ಯಾರೇ ಮರಣ ಹೊಂದಿದ ಸಮಯದಲ್ಲಿ ನೇತ್ರದಾನ ಮಾಡಲು ಪ್ರೇರೇಪಿಸಬೇಕು. ನೇತ್ರ ವೈದ್ಯರಿಗೆ, ಕಣ್ಣಾ ಸ್ಪತ್ರೆಗೆ ಅಥವಾ ಸರಕಾರಿ ಆಸ್ಪತ್ರೆಗೆ ಇಲ್ಲವೆ ಸಹಾಯವಾಣಿ 104ಕ್ಕೆ ಕೂಡಲೇ ಕರೆ ಮಾಡಿ ಮಾಹಿತಿ ನೀಡಬೇಕೆಂದು ಅವರು ಮನವಿ ಮಾಡಿದರು.
ಪ್ರತಿಯೊಬ್ಬರೂ ನೇತ್ರಗಳನ್ನು ದಾನ ಮಾಡುವ ಮೂಲಕ ತಮ್ಮಿಂದ ಒಬ್ಬ ವ್ಯಕ್ತಿಯ ಬಾಳಿಗೆ ಬೆಳಕಾಗಬಹುದಾದ ನೇತ್ರಗಳನ್ನು ಸ್ವಯಂ ಪ್ರೇರಿತರಾಗಿ ದಾನ ಮಾಡಲು ಇಂದೇ ತಮ್ಮ ಹೆಸರನ್ನು ನೋಂಂದಾಯಿಸಿಕೊಳ್ಳಬೇಕು ಎಂದು ಹೇಳಿದರು. ಅಭಿಯಾನದ ನಿರ್ದೇಶಕ ಡಾ.ರತ್ನನ್ ಕಲ್ಮಾಕರ್, ಜಂಟಿ ನಿರ್ದೇಶಕ ಡಾ.ನಟರಾಜ ಉಪಸ್ಥಿತರಿದ್ದರು.





