ಕೃಷ್ಣ ಜನ್ಮಾಷ್ಟಮಿ ಸಂಭ್ರಮ; ವಿಟ್ಲಪಿಂಡಿಗೆ ಭರದ ಸಿದ್ಧತೆ
ಉಡುಪಿ, ಆ.24: ಇಲ್ಲಿನ ಜನತೆ ಶ್ರೀಕೃಷ್ಣಜನ್ಮಾಷ್ಟಮಿಯ ಹಿನ್ನೆಲೆಯಲ್ಲಿ ಬುಧವಾರ ಉಪವಾಸವಿದ್ದು, ಕಡಗೋಲು ಕೃಷ್ಣನ ಜನ್ಮದಿನದ ಸಂಭ್ರಮವನ್ನು ಆಚರಿಸಿದರು. ಮತ್ತಷ್ಟು ಮಂದಿ ಗುರುವಾರವೂ ಈ ಆಚರಣೆಗೆ ಮುಂದಾಗಲಿದ್ದಾರೆ. ಈ ನಡುವೆ ಶುಕ್ರವಾರ ನಡೆಯುವ ಶ್ರೀಕೃಷ್ಣ ಲೀಲೋತ್ಸವಕ್ಕೆ ಉಡುಪಿ ಸಜ್ಜಾಗುತ್ತಿದೆ. ಇದಕ್ಕಾಗಿ ಉಡುಪಿಯ ಶ್ರೀಕೃಷ್ಣ ಮಠ ಹಾಗೂ ರಥಬೀದಿ ಪರಿಸರಗಳೆಲ್ಲವೂ ಸಿಂಗರಿಸಿಕೊಂಡು ಸಂಭ್ರಮಿಸುತ್ತಿವೆ.
ಪೇಜಾವರ ಶ್ರೀಗಳು ಕೃಷ್ಣ ಹಾಗೂ ಚಂದ್ರನಿಗೆ ಅರ್ಘ್ಯಪ್ರದಾನ ಮಾಡಿದ ಬಳಿಕ ಭಕ್ತರು ಸರದಿಯಂತೆ ಅರ್ಘ್ಯಪ್ರದಾನ ಮಾಡುವ ಅವಕಾಶ ಪಡೆದರು. ಪರ್ಯಾಯ ಸ್ವಾಮೀಜಿಗಳ ನೇತೃತ್ವದಲ್ಲಿ ಕೃಷ್ಣನಿಗೆ ವಿಶೇಷ ಪೂಜೆಗಳು ನಡೆದವು.
ಮಧ್ವ ಮಂಟಪ ಸೇರಿದಂತೆ ವಿವಿಧೆಡೆ ಅಖಂಡ ಭಜನೆ ಬೆಳಗಿನಿಂದಲೇ ನಡೆಯಿತು. ಜನರು ದಿನವಿಡೀ ಉಪವಾಸವಿದ್ದು ಕೃಷ್ಣ ಜನಿಸಿದ ಬಳಿಕ ಅರ್ಘ್ಯ ಪ್ರದಾನ ಮಾಡಿ ಪ್ರಸಾದ ಸ್ವೀಕರಿಸುವ ದೃಶ್ಯ ಸಾಮಾನ್ಯವಾಗಿತ್ತು.
ವಿವಿಧ ಸ್ಪರ್ಧೆಗಳು: ಬುಧವಾರ ರಾಜಾಂಗಣ, ಕನಕ ಮಂಟಪ ಸೇರಿದಂತೆ ವಿವಿಧೆಡೆ ಪುಟಾಣಿ ಮಕ್ಕಳಿಗಾಗಿ ಮುದ್ದುಕೃಷ್ಣ ಸ್ಪರ್ಧೆ ನಡೆದವು. ಅಲ್ಲದೆ ಮಹಿಳೆಯರಿಗಾಗಿ ಮೊಸರು ಕಡೆಯುವ ಸ್ಪರ್ಧೆ, ವಿದ್ಯಾರ್ಥಿಗಳಿಗೆ ನೃತ್ಯ ಸ್ಪರ್ಧೆಗಳೂ ನಡೆದವು. ಆದರೆ ಬುಧವಾರ ನಗರದಲ್ಲಿ ಹುಲಿವೇಷ, ಸೇರಿದಂತೆ ವಿವಿಧ ವೇಷಗಳ ಸಂಖ್ಯೆ ತುಂಬಾ ಕಡಿಮೆ ಇತ್ತು. ಹುಲಿ ವೇಷಗಳ ಆರ್ಭಟವಂತೂ ಎಲ್ಲೂ ಕಂಡುಬರಲಿಲ್ಲ. ಗುರುವಾರ ಇವುಗಳು ಬೀದಿ ಬೀದಿಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಗುರುವಾರವೂಮಠದಲ್ಲಿ ಮುದ್ದುಕೃಷ್ಣ ಸ್ಪರ್ಧೆ, ಬಾಲಕೃಷ್ಣ ಸ್ಪರ್ಧೆಗಳು ಹಾಗೂ ಸಂಜೆ ರಾಜಾಂಗಣ ದಲ್ಲಿ ಸಾಂಪ್ರದಾಯಿಕ ಹುಲಿವೇಷ, ಆಧುನಿಕ ಹುಲಿವೇಷ - ಜಾನಪದ ವೇಷಗಳ ಸ್ಪರ್ಧೆಗಳು ನಡೆಯಲಿವೆ.
ಸಚಿವ ರೈ ಶುಭಾಶಯ
ಮಂಗಳೂರು, ಆ.24: ನಾಡಿನಾದ್ಯಂತ ಆಚರಿಸುವ ಶ್ರೀೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಜನತೆಗೆ ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಶುಭ ಹಾರೈಸಿದ್ದಾರೆ.
ಶ್ರೀಕೃಷ್ಣನ ಸಂದೇಶಗಳು ಸದಾ ಈ ನಾಡಿನ ಒಳಿತಿಗಾಗಿ ಇರುವಂತದ್ದು. ಸರ್ವರನ್ನೂ ಬೆಸೆದು, ಉತ್ತಮ ಸಮಾಜಕ್ಕಾಗಿ ಕೃಷ್ಣನ ಹಿತೋಪದೇಶ ಮಾದರಿಯಾಗಿದೆ. ಕೃಷ್ಣ ಜನ್ಮಾಷ್ಟಮಿ ಸರ್ವರಿಗೂ ಶಾಂತಿ ನೆಮ್ಮದಿಯನ್ನು ತರಲಿ ಎಂದು ಸಚಿವ ರಮಾನಾಥ ರೈ ತನ್ನ ಸಂದೇಶದಲ್ಲಿ ತಿಳಿಸಿದ್ದಾರೆ.







