ಭಾರತದಲ್ಲಿ ಕ್ರೀಡಾ ತಯಾರಿಗೆ ಹಣ ಕಮ್ಮಿ ; ಗೆದ್ದರೆ ಬಂಪರ್ ಬಹುಮಾನ
ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಜಯಿಸಿದ ಸಿಂಧುಗೆ 13 ಕೋಟಿ ರೂ. ಕಂಚು ಜಯಿಸಿದ ಸಾಕ್ಷಿಗೆ 5.6 ಕೋಟಿ ರೂ.

ಹೊಸದಿಲ್ಲಿ, ಆ.24: ಎಲ್ಲ ದೇಶಗಳಲ್ಲಿ ಕ್ರೀಡಾ ತಯಾರಿಗೆ ಅಥ್ಲೀಟ್‌ಗಳಿಗೆ ಗರಿಷ್ಠ ಹಣ ನೀಡಲಾಗುತ್ತದೆ. ಆದರೆ ಭಾರತದಲ್ಲಿ ಕ್ರೀಡಾ ತಯಾರಿಗೆ ನೀಡಲಾಗುವ ಅನುದಾನ ಕಡಿಮೆ. ಪದಕ ಗೆದ್ದ ಕ್ರೀಡಾ ಪಟುಗಳಿಗೆ ಹಣದ ಹೊಳೆ ಹರಿದು ಬರುತ್ತದೆ.
ಲಭ್ಯ ಮಾಹಿತಿ ಪ್ರಕಾರ ಒಲಿಂಪಿಕ್ಸ್‌ನ ಮಹಿಳೆಯರ ಬ್ಯಾಡ್ಮಿಂಟನ್‌ನ ಸಿಂಗಲ್ಸ್‌ನಲ್ಲಿ ಬೆಳ್ಳಿ ಜಯಿಸಿದ ಪಿ.ವಿ ಸಿಂಧು ಅವರಿಗೆ ಒಲಿಂಪಿಕ್ಸ್ ಪೂರ್ವದಲ್ಲಿ ಸರಕಾರ 44 ಲಕ್ಷ ರೂ. ಒದಗಿಸಿತ್ತು. ಅವರಿಗೆ ಪದಕ ಜಯಿಸಿದ ಬಳಿಕ 13 ಕೋಟಿ ರೂ.ಗಳ ನಗದು ಬಹುಮಾನ ಸಿಕ್ಕಿದೆ.
ರಜತ ಪದಕ ಪಡೆದ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್ ಅವರಿಗೆ ಒಲಿಂಪಿಕ್ಸ್ ತಯಾರಿಗೆ 12 ಲಕ್ಷ ರೂ. ಸಿಕ್ಕಿದೆ. ಪ್ರಶಸ್ತಿ ಜಯಿಸಿದ ಬಳಿಕ 5.6 ಕೋಟಿ ರೂ. ಸಿಕ್ಕಿದೆ.
ಜಿಮ್ನಾಸ್ಟಿಕ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ದೀಪಾ ಕರ್ಮಾಕರ್ ಅವರಿಗೆ ಒಲಿಂಪಿಕ್ಸ್‌ನ ಕೇವಲ 2 ಲಕ್ಷ ರೂ. ನೀಡಲಾಗಿತ್ತು. ಅವರು ಫೈನಲ್‌ನಲ್ಲಿ 4ನೆ ಸ್ಥಾನ ಪಡೆದು ಜಿಮ್ಮಾಸ್ಟಿಕ್‌ನಲ್ಲಿ ಭಾರತದ ಪರ ದಾಖಲೆ ಬರೆದಿದ್ದರೂ, ಅವರಿಗೆ ಕೇವಲ 15 ಲಕ್ಷ ರೂ. ಬಹುಮಾನ ಸಿಕ್ಕಿದೆ.
ಲಲಿತಾ ಶಿವಾಜಿ ಬಾಬರ್ ಭಾರತದ ಪರ ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್‌ನಲ್ಲಿ ಫೈನಲ್ ಪ್ರವೇಶಿಸಿದ ಮೂರನೆ ಅಥ್ಲಿಟ್.
ಲಲಿತಾ ಅವರು ಆ.15ರಂದು ನಡೆದ ವನಿತೆಯರ 3000 ಮೀಟರ್ ಸ್ಟೀಪಲ್ ಚೇಸ್‌ನಲ್ಲಿ 10ನೆ ಸ್ಥಾನದೊಂದಿಗೆ ಗೌರವಯುತವಾಗಿ ಒಲಿಂಪಿಕ್ಸ್‌ನಲ್ಲಿ ಅಭಿಯಾನ ಕೊನೆಗೊಳಿಸಿದರು. ಒಟ್ಟು 12 ಮಂದಿ ಫೈನಲ್‌ನಲ್ಲಿ ಪದಕದ ಬೇಟೆ ನಡೆಸಿದ್ದರು. ಆದರೆ ಲಲಿತಾ ಕಠಿಣ ಹೋರಾಟ ನಡೆಸಿದ್ದರೂ, ಅವರಿಗೆ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ. ಅದೃಷ್ಟ ಕೈಗೊಟ್ಟಿತು. ಕೆಲವೇ ಸೆಕೆಂಡ್‌ಗಳ ಅಂತರದಿಂದ ಪದಕ ತಪ್ಪಿತ್ತು.
ಲಲಿತಾ ಮತ್ತು ದೀಪಾ ಕರ್ಮಾಕರ್ ಅವರ ಸಾಧನೆಗೆ ತಲಾ 15 ಲಕ್ಷ ರೂ.ಗಳ ಬಹುಮಾನ ಸಿಕ್ಕಿದೆ. ಲಲಿತಾ ಅವರಿಗೆ ತಯಾರಿಗೆ ಹೆಚ್ಚು ಹಣ ಸಿಕ್ಕಿದ್ದರೂ ದೀಪಾಗೆ ಕೇವಲ 2 ಲಕ್ಷ ರೂ. ನೀಡಲಾಗಿತ್ತು.
ಬಹತೇಕ ದೇಶಗಳಲ್ಲಿ ಪದಕ ಗೆಲ್ಲುವ ಕ್ರೀಡಾ ಪಟುಗಳನ್ನು ರೂಪಿಸಲು ಹೆಚ್ಚಿನ ಹಣ ವಿನಿಯೋಗಿಸುತ್ತಿದೆ. ಆದರೆ ಭಾರತದಲ್ಲಿ ಪದಕ ಗೆದ್ದರೆ ಬಂಪರ್ ಬಹುಮಾನ ಸಿಗುತ್ತದೆ. ಸಿಂಧು, ಸಾಕ್ಷಿ, ಲಲಿತಾ ಮತ್ತು ದೀಪಾ ಅವರಿಗೆ ಈ ತನಕ 18.9 ಕೋಟಿ ರೂ. ಬಹುಮಾನ ಸಿಕ್ಕಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ಕಳೆದ ಒಲಿಂಪಿಕ್ಸ್‌ನಲ್ಲಿ 118 ಮಂದಿ ಅಥ್ಲೀಟ್‌ಗಳು ಭಾರತದ ಪರ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಈ ಪೈಕಿ 67 ಅಥ್ಲೀಟ್‌ಗೆ ಒಲಿಂಪಿಕ್ಸ್‌ನ ತಯಾರಿಗೆ ಟಾರ್ಗೆಟ್ ಒಲಿಂಪಿಕ್ಸ್ ಪೊಡಿಯಮ್ ಸ್ಕೀಮ್(ಟಿಒಪಿಎಸ್) ನಲ್ಲಿ 17.1 ಕೋಟಿ ರೂ. ನೆರವು ನೀಡಲಾಗಿದೆ. ಒಲಿಂಪಿಕ್ಸ್‌ನಲ್ಲಿ ವಿಶೇಷ ಸಾಧನೆಗೈದ ನಾಲ್ವರಿಗೆ ನೀಡಲಾದ ಹಣಕ್ಕಿಂತ ಕಡಿಮೆ ಕ್ರೀಡಾಪಟುಗಳಿಗೆ ಒಲಿಂಪಿಕ್ಸ್‌ನ ತಯಾರಿಗೆ ಹಣ ಸಿಕ್ಕಿದೆ.
67 ಅಥ್ಲೀಟ್‌ಗಳಿಗೆ ಕ್ರೀಡಾ ಒಕ್ಕೂಟದಿಂದ 13.7 ಕೋಟಿ ಸೇರಿದಂತೆ ಒಟ್ಟು 30.8 ಕೋಟಿ ರೂ. ನೀಡಲಾಗಿದೆ. ಅಂದರೆ ಇವರಿಗೆ ತರಬೇತಿಗೆ ನೀಡಲಾಗಿರುವ ಹಣಕ್ಕಿಂತ ಶೇ. 60ರಷ್ಟು ಹಣ ಪದಕ ವಿಜೇತ ಇಬ್ಬರು ಕ್ರೀಡಾಪಟುಗಳಿಗೆ ಸಂದಾಯವಾಗಿದೆ.
ಇಲ್ಲಿ ಗಮನಿಸಬೇಕಾದ ವಿಚಾರ ಏನೆಂದರೆ ಸರಕಾರ ಸೇರಿದಂತೆ ವಿವಿಧ ಸಂಸ್ಥೆಗಳು ಪದಕ ವಿಜೇತರಿಗೆ ಭಾರೀ ಮೊತ್ತದ ಬಹುಮಾನ ನೀಡುವುದಾಗಿ ಪ್ರಕಟಿಸಿತ್ತು. ಆದರೆ ತಯಾರಿಗೆ ಹಣ ನೀಡುವ ಬಗ್ಗೆ ಯಾರೂ ಗಮನ ಹರಿಸಲಿಲ್ಲ.
ಭಾರತದ ಒಲಿಂಪಿಕ್ಸ್ ಸಂಸ್ಥೆಯು ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸುವವರಿಗೆ 50 ಲಕ್ಷ ರೂ. , ಬೆಳ್ಳಿ ಪದಕ ಜಯಿಸಿದ ಕ್ರೀಡಾಪಟುವಿಗೆ 30 ಲಕ್ಷ ರೂ ಮತ್ತು ಕಂಚು ಗೆಲ್ಲುವರಿಗೆ 20 ಲಕ್ಷ ರೂ. ಪ್ರಕಟಿಸಿತ್ತು. ಹರ್ಯಾಣ ಸರಕಾರ ಚಿನ್ನ ಗೆಲ್ಲುವ ಕ್ರೀಡಾಪಟುವಿಗೆ 6 ಕೋಟಿ ರೂ. ಬಹುಮಾನ ಪ್ರಕಟಿಸಿತ್ತು. ರೈಲ್ವೇ ಇಲಾಖೆಯು ಭಾರೀ ಮೊತ್ತದ ಬಹುಮಾನ ನೀಡುವುದಾಗಿ ಹೇಳಿತ್ತು.
ವಿಶ್ವದ ವಿವಿಧ ದೇಶಗಳ ಒಲಿಂಪಿಕ್ ಸಂಸ್ಥೆಗಳು ಪದಕ ವಿಜೇತ ಅಥ್ಲೀಟ್‌ಗಳಿಗೆ ನಗದು ಪುರಸ್ಕಾರ ಅಥವಾ ಬೋನಸ್‌ನ್ನು ನೀಡುವುದಾಗಿ ಹೆಳಿದೆ. ಚಿನ್ನದ ಮೀನು ಖ್ಯಾತಿಯ ಅಮೆರಿಕದ ಮೈಕಲ್ ಫೆಲ್ಪ್ಸ್ ಅವರನ್ನು ಹಿಂದಿಕ್ಕಿ ಚಿನ್ನ ಜಯಿಸಿದ ಸಿಂಗಾಪುರದ ಈಜುಪಟು 1 ಮಿಲಿಯನ್ ಸಿಂಗಾಪುರ ಡಾಲರ್ ಮೊತ್ತದ ನಗದು ಪುರಸ್ಕಾರ ಪ್ರಕಟಿಸಿದೆ. ಇದರಲ್ಲಿ ಶೇ 20ರಷ್ಟು ಹಣ ಕ್ರೀಡಾ ಅಭಿವೃದ್ಧಿಗೆ ಬಳಕೆಯಾಗಲಿದೆ. ಅಮೆರಿಕದ ಒಲಿಂಪಿಕ್ ಸಮಿತಿಯು ಚಿನ್ನ ಜಯಿಸಿದವರಿಗೆ ಬೋನಸ್ ಸೇರಿದಂತೆ ಹೆಚ್ಚುವರಿ ಪ್ರೋತ್ಸಾಹ ಧನ ಪ್ರಕಟಿಸಿದೆ. ಚಿನ್ನ ಗೆದ್ದವರಿಗೆ 25 ಸಾವಿರ ಡಾಲರ್, ಬೆಳ್ಳಿ ಪದಕ ವಿಜೇತರಿಗೆ 15,000 ಸಾವಿರ ಡಾಲರ್ ಮತ್ತು ಕಂಚು ಗೆದ್ದವರಿಗೆ 10,000 ಡಾಲರ್ ಮೊತ್ತವನ್ನು ಅಮೆರಿಕ ಪಾವತಿಸಲಿದೆ. ಆದರೆ ಇದೇ ದೇಶಗಳು ಒಲಿಂಪಿಕ್ಸ್‌ನ ತಯಾರಿಗೆ ಭಾರೀ ಮೊತ್ತದ ಹಣ ಸುರಿದಿದೆ ಎನ್ನುವುದು ಇಲ್ಲಿ ಗಮನಿಸತಕ್ಕ ವಿಚಾರವಾಗಿದೆ.





