2002 ರ ಗುಜರಾತ್ ಹತ್ಯಾಕಾಂಡ ' ಆಯೋಜಿಸಲು' ಪಾಟಿದಾರರನ್ನು ಬಳಸಿದ ಮೋದಿ
ಹಾರ್ದಿಕ್ ಪಟೇಲ್ ಆರೋಪ

ಉದಯಪುರ್ , ಆ. 25 : ಮಹತ್ವದ ಬೆಳವಣಿಗೆಯೊಂದರಲ್ಲಿ ಗುಜರಾತ್ ಪಟೇಲ್ ಸಮುದಾಯದ ಮೀಸಲಾತಿ ಚಳವಳಿಯ ನಾಯಕ ಹಾರ್ದಿಕ್ ಪಟೇಲ್, ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವೊಂದನ್ನು ಬರೆದು 2002 ರ ಗುಜರಾತ್ ಹತ್ಯಾಕಾಂಡ " ಆಯೋಜಿಸಲು" ಪಾಟಿದಾರ ಸಮುದಾಯವನ್ನು ಬಳಸಿದ್ದಾಗಿ ಆರೋಪಿಸಿ ಖಂಡಿಸಿದ್ದಾರೆ. ದೇಶದ್ರೋಹದ ಆರೋಪದಲ್ಲಿ ಜೈಲು ಸೇರಿ ಇತ್ತೀಚಿಗೆ ಬಿಡುಗಡೆಯಾಗಿ ಗುಜರಾತ್ ಹೈಕೋರ್ಟ್ ಷರತ್ತಿನಂತೆ ಉದಯಪುರದಲ್ಲಿ ಆರು ತಿಂಗಳ ವಾಸದಲ್ಲಿರುವ ಹಾರ್ದಿಕ್ ಅಲ್ಲಿಂದಲೇ ಪ್ರಧಾನಿಗೆ ಪತ್ರ ಬರೆದಿದ್ದಾರೆ.
ಹಿಂದುಸ್ಥಾನ್ ಟೈಮ್ಸ್ ಗೆ ಪ್ರತಿ ಸಿಕ್ಕಿರುವ ಆಗಸ್ಟ್ 24ರ ದಿನಾಂಕದ ಈ ಪತ್ರದಳ್ಳಿ 2002 ರ ಗಲಭೆಯಲ್ಲಿ ಪಾಟಿದಾರರು ದೊಡ್ಡ ಸಂಖ್ಯೆಯಲ್ಲಿ ಜೀವಾವಧಿ ಶಿಕ್ಷೆಗೊಳಲಾಗಿರುವ ಆರು ಪ್ರಕರಣಗಳನ್ನು ಉಲ್ಲೇಖಿಸಿ " ಮೋದಿಜಿ , ನೀವು ಪಾಟಿದಾರರ ಬೆನ್ನಿಗೆ ಇರಿದಿದ್ದೀರಿ " ಎಂದು ಹಾರ್ದಿಕ್ ಆರೋಪಿಸಿದ್ದಾರೆ. " 2002 ರ ಹತ್ಯಾಕಾಂಡವನ್ನು ನರೇಂದ್ರ ಮೋದಿಯವರೇ ಆಯೋಜಿಸಿದ್ದರು ಎಂದು ನಮಗೆಲ್ಲರಿಗೂ ಗೊತ್ತಿದೆ. ಅದರ ಲಾಭ ಪಡೆದು ಮೊದಲು ಸಿ ಎಂ ಆದ ಅವರು ಬಳಿಕ ಪ್ರಧಾನಿಯಾಗಿದ್ದಾರೆ " ಎಂದು ಹಾರ್ದಿಕ್ ಗಂಭೀರ ಆರೋಪ ಮಾಡಿದ್ದಾರೆ.
" ಈ ಹತ್ಯಾಕಾಂಡಗಳಲ್ಲಿ ಶಿಕ್ಷೆಗೊಳಗಾದ ಪಾಟಿದಾರರು ಈಗ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ. ಈಗ ಪ್ರಧಾನಿಯಾಗಿರುವ ಮೋದಿಯವರಿಗೆ ರಾಷ್ಟ್ರಪತಿ ಬಳಿ ಇವರಿಗೆಲ್ಲಾ ಕ್ಷಮೆ ಕೊಡಿಸುವ ಅವಕಾಶವಿದೆ. ಆದರೆ ಈಗ ಜಗತ್ತಿಗೆ ಮತ್ತು ಭಾರತಕ್ಕೆ ತನ್ನನ್ನು ಜಾತ್ಯಾತೀತ ನಾಯಕನೆಂದು ಬಿಂಬಿಸಿಕೊಳ್ಳಲು ಅವರು ಹಾಗೆ ಮಾಡುವುದಿಲ್ಲ " ಎಂದೂ ಹಾರ್ದಿಕ್ ಕಿಡಿಗಾರಿದ್ದಾರೆ.







