ವಿದ್ಯಾರ್ಥಿಗಳಿಂದ ಶಾಂತಿ ಮತ್ತು ಮಾನವೀಯತೆ ಜಾಥಾ

ಕೆಮ್ಮಣ್ಣು, ಆ.25: ನಾವೆಲ್ಲರೂ ಭಾರತೀಯರು, ನಮ್ಮ ದೇಹದಲ್ಲಿ ಹರಿಯುತ್ತಿರುವ ರಕ್ತ ಒಂದೆ. ಹಿಂದು, ಮುಸ್ಲಿಮ್, ಕ್ರೈಸ್ತ ಎಂಬ ಭೇದ ನಮ್ಮಲ್ಲಿರಬಾರದು. ಸೌಹಾರ್ದಯುತ ಜೀವನ ನಮ್ಮದಾಗಬೇಕು ಎಂದು ಪಡುತೋನ್ಸೆ ಗ್ರಾಮ ಪಂಚಾಯತ್ ಸದಸ್ಯ ಗುರುರಾಜ್ ಭಟ್ ಹೇಳಿದರು. ಹೂಡೆಯ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ, ಜಮಾಅತೆ ಇಸ್ಲಾಮಿ ಹಿಂದ್ ಹಾಗೂ ಸಾಲಿಹಾತ್ ಆಂಗ್ಲ ಮಾಧ್ಯಮ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಶಾಂತಿ ಮತ್ತು ಮಾನವೀಯತೆಯ ಜಾಥಾದ ಸಮಾರೋಪ ಸಮಾರಂಭವನ್ನುದ್ದೇಶಿಸಿ, ಅವರು ಮಾತನಾಡುತ್ತಿದ್ದರು.
ನಾವು ಹುಟ್ಟುವಾಗ ಧರ್ಮಗಳನ್ನು ಆಯ್ಕೆ ಮಾಡಿ ಹುಟ್ಟುದಿಲ್ಲ. ನಮ್ಮ ತಂದೆ-ತಾಯಿಗಳ ಧರ್ಮ ಯಾವುದೋ ಅದನ್ನು ಅನುಸರಿಸುತ್ತ ಬೆಳೆದು ಬರುತ್ತೇವೆ. ಆದ್ದರಿಂದ ನಮ್ಮ ನಮ್ಮ ಧರ್ಮವನ್ನು ಆಚರಿಸುತ್ತ, ಇತರರ ಆಚಾರ ವಿಚಾರಗಳನ್ನು ಗೌರವಿಸಿ ಬಾಳಬೇಕೆಂದರು.
ಇದ್ರೀಸ್ ಹೂಡೆ ಮಾತನಾಡಿ, ಭಾರದಲ್ಲಿ ಎಲ್ಲರೂ ಸಮಾನರು. ಬಡ ಜನರಿಗೂ ಸಂವಿಧಾನ ಸಮಾನ ಹಕ್ಕುಗಳನ್ನು ಕಲ್ಪಿಸಿದೆ. ಸಂವಿಧಾನಕ್ಕೆ ಗೌರವ ಸಲ್ಲಿಸಿ ಅದರಂತೆ ನಡೆಯಬೇಕು. ಇನ್ನೊಬ್ಬರನ್ನು ಹಿಂಸಿಸಿ ಬದುಕುವ ಪ್ರವೃತ್ತಿಯನ್ನು ದೂರೀಕರಿಸಿ ಸೌಹಾರ್ದದ ಬದುಕಿಗೆ ನಾಂದಿ ಹಾಡಬೇಕು ಎಂದರು.
ಸಭಾ ಕಾರ್ಯಕ್ರಮಕ್ಕೆ ಮೊದಲು ಮಲ್ಪೆಠಾಣೆಯ ಎಎಸ್ಸೈ ಜನಾರ್ದನ್, ಜಮಾಅತೆ ಇಸ್ಲಾಮಿ ಹಿಂದ್‌ನ ಸ್ಥಾನೀಯ ಅಧ್ಯಕ್ಷ ಅಬ್ದುಲ್ ಖಾದರ್ ಮೊಯ್ದಿನ್ ಪಾರಿವಾಳವನ್ನು ಹಾರಿ ಬಿಡುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು.
ಪಡುತೋನ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಫೌಝಿಯಾ ಸಾದಿಕ್ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಎಸ್‌ಐಒ ಸ್ಥಾನೀಯ ಅಧ್ಯಕ್ಷ ಸಲಾವುದ್ದೀನ್, ಸಾಲಿಹಾತ್ ಸಮೂಹ ಸಂಸ್ಥೆಯ ಕಾರ್ಯದರ್ಶಿ ಜಿ.ಇಮ್ತಿಯಾಝ್, ವ್ಯವಸ್ಥಾಪಕ ಅಸ್ಲಮ್, ಹೈಕಾಡಿ ಸೋಲಿಡಾರಿಟಿ ಯೂತ್‌ಮೂವ್‌ಮೆಂಟ್‌ನ ಹುಸೈನ್ ಕೋಡಿಬೆಂಗ್ರೆ, ಅಲ್ತಾಫ್ ನಕ್ವಾ, ಮೌಲನ ಆದಮ್ ಸಾಹೇಬ್ ಉಪಸ್ಥಿತರಿದ್ದರು.
ಶುಐಬ್ ಮಲ್ಪೆಕಾರ್ಯಕ್ರಮ ನಿರೂಪಿಸಿದರು. ಯಾಸೀನ್ ಕೋಡಿಬೆಂಗ್ರೆ ವಂದಿಸಿದರು.







