ನಟಿ ರಮ್ಯಾ ವಿರುದ್ಧ ದೇಶದ್ರೋಹ ಪ್ರಕರಣ: ಪಾಕ್ ಮಾಧ್ಯಮಗಳಲ್ಲಿ ವರದಿ

ಇಸ್ಲಾಮಾಬಾದ್,ಆಗಸ್ಟ್ 25: ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್‌ರ ಪಾಕಿಸ್ತಾನ ನರಕವಾಗಿದೆ ಎಂಬ ಹೇಳಿಕೆಯನ್ನು ಒಪ್ಪಲು ನಿರಾಕರಿಸಿದ ಕಾಂಗ್ರೆಸ್ ಮಾಜಿ ಸಂಸದೆ ಚಿತ್ರನಟಿ ರಮ್ಯಾ ವಿರುದ್ಧ ದೇಶದ್ರೋಹದ ಆರೋಪ ಹೊರಿಸಿ ಪ್ರಕರಣ ದಾಖಲಾಗಿರುವುದನ್ನು ಪಾಕಿಸ್ತಾನದ ಮಾಧ್ಯಮಗಳು ಕೂಡಾ ವರದಿಮಾಡಿವೆ. ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ರಮ್ಯಾ ಪಾಕಿಸ್ತಾನೀಯರು ಒಳ್ಳೆಯವರು ಎಂದು ಹೇಳಿದ್ದು ನಂತರ ವಿವಾದವಾಗಿತ್ತು.
ರಮ್ಯಾ ತನ್ನ ಹೇಳಿಕೆಗೆ ವಿಷಾದ ವ್ಯಕ್ತಪಡಿಸಲಾರೆ ಎಂದು ಹೇಳಿದ್ದು," ತನಗೆ ಸ್ವತಂತ್ರವಾಗಿ ಅಭಿಪ್ರಾಯ ಪ್ರಕಟಿಸುವ ಹಕ್ಕಿದೆ. ಎಲ್ಲರಿಗೂ ಅವರದ್ದಾದ ಅಭಿಪ್ರಾಯಗಳು ಇರುತ್ತವೆ. ನಿಮ್ಮ ಆಶಯಗಳನ್ನು ಯಾರಮೇಲೆಯೂ ಹೇರಲು ನೋಡಬೇಡಿ" ಎಂದು ಹೇಳುವ ಮೂಲಕ ರಮ್ಯಾ ತನ್ನ ಹೇಳಿಕೆಯನ್ನು ವಿವಾದಗೊಳಿಸಿದವರಿಗೆ ಖಾರವಾದ ಉತ್ತರ ನೀಡಿದ್ದಾರೆ ಎನ್ನಲಾಗಿದೆ. ಸಾರ್ಕ್ ಸಮ್ಮೇಳನದಲ್ಲಿ ಭಾಗವಹಿಸಿ ಪಾಕಿಸ್ತಾನದಿಂದ ಮರಳಿ ಬಂದ ಮೇಲೆ ತನ್ನ ಅಭಿಪ್ರಾಯವನ್ನು ಕಾರ್ಯಕ್ರಮವೊಂದರಲ್ಲಿ ಅವರು ವ್ಯಕ್ತಪಡಿಸಿದರು. ಈ ಹೇಳಿಕೆಯೀಗ ಪಾಕ್ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ ಎಂದು ವರದಿ ತಿಳಿಸಿದೆ.





