ಅತ್ಯಾಚಾರ ಆರೋಪ ಪ್ರಕರಣ: ಪೊಲೀಸ್ ನೋಟಿಸ್ ಪ್ರಶ್ನಿಸಿದ್ದ ಅರ್ಜಿ ವಾಪಸ್ ಪಡೆದ ರಾಘವೇಶ್ವರ ಸ್ವಾಮೀಜಿ

ಬೆಂಗಳೂರು, ಆ.25: ರಾಮಕಥಾ ಗಾಯಕಿ ಪ್ರೇಮಲತಾ ಶಾಸ್ತ್ರಿ ಮೇಲಿನ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ವೈದ್ಯಕೀಯ ಪರೀಕ್ಷೆಗೆ ಒಳಪಡಲು ಪೊಲೀಸರು ನೀಡಿದ್ದ ನೋಟಿಸ್ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ಹಿಂಪಡೆದಿದ್ದಾರೆ.
ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಅವರಿದ್ದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠವು ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ವೇಳೆ ಸ್ವಾಮೀಜಿ ಪರ ವಕೀಲರು, ಅರ್ಜಿ ಹಿಂಪಡೆಯಲು ಅವಕಾಶ ನೀಡುವಂತೆ ಮನವಿ ಮಾಡಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹೈಕೋರ್ಟ್ ವಿಭಾಗೀಯ ಪೀಠವು ಮುಖ್ಯಅರ್ಜಿಯನ್ನು ಇತ್ಯರ್ಥಪಡಿಸಿದೆ. ಹಾಗಾಗಿ ಈ ಅರ್ಜಿ ವಿಚಾರಣೆ ನಡೆಸುವುದು ಸೂಕ್ತವಲ್ಲ. ಅವಶ್ಯಕತೆ ಬಿದ್ದರೆ ಪುನಃ ಅರ್ಜಿ ಸಲ್ಲಿಸುವ ಅವಕಾಶವನ್ನು ಮುಕ್ತವಾಗಿರಿಸಬೇಕು. ಅಲ್ಲದೆ ಈ ಅರ್ಜಿಯನ್ನು ಹಿಂಪಡೆಯಲು ಅನುಮತಿ ನೀಡಬೇಕು ಎಂದು ಸ್ವಾಮೀಜಿ ಪರ ವಕೀಲರು ಮನವಿ ಮಾಡಿದರು. ಇದನ್ನು ಪರಿಗಣಿಸಿದ ಹೈಕೋರ್ಟ್ ಅರ್ಜಿ ಹಿಂಪಡೆಯಲು ಅನುಮತಿ ನೀಡಿತು.
Next Story





