ಅಳಿವೆಬಾಗಿಲಿನಲ್ಲಿ ಎರಡು ದೋಣಿ ಪಲ್ಟಿ: 12 ಮಂದಿಗೆ ಗಾಯ
.gif)
ಕಾಸರಗೋಡು, ಆ.25: ಕೀಯೂರು ಅಳಿವೆಬಾಗಿಲಿನಲ್ಲಿ ಇಂದು ಬೆಳಗ್ಗೆ ಎರಡು ದೋಣಿಗಳು ಅಪಘಾತಕ್ಕೀಡಾಗಿ 12 ಮಂದಿ ಗಾಯಗೊಂಡಿದ್ದಾರೆ. ದೋಣಿಗಳಿಗೆ ತೀವ್ರ ಹಾನಿ ಉಂಟಾಗಿದ್ದು, ಇಂಜಿನ್, ಬಲೆಗಳು ಸಂಪೂರ್ಣವಾಗಿ ನಾಶಗೊಂಡಿದೆ. ಇದರಿಂದ ಸುಮಾರು 12 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.
ಘಟನೆಯಲ್ಲಿ ಕೀಯೂರು ನಿವಾಸಿಗಳಾದ ಉಮೇಶನ್(35), ಅಬ್ದುಲ್ ಖಾದರ್(31), ರಂಜಿತ್(43), ವಿಜೇಶ್(30), ಅಶೋಕನ್(36), ಲಾಲು(30), ಸಾಯಿಬಾಬು (42), ಚಂದ್ರನ್ (40), ಶಶಿ (40), ಸಾಬಿತ್ (35), ಬಿನು(35) ಹಾಗೂ ಕಾಸಗೋಡು ಕಸಬ ಕಡಪ್ಪುರದ ಬಾಲನ್(49)ಎಂಬಿವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಶ್ರೀಕುರುಂಬಾ ಕಂಪೆನಿಯ ದೋಣಿ ಹಾಗೂ ಯೂಸುಫ್ ಎಂಬವರ ಸಕಿಯಾ ಎಂಬ ದೋಣಿಗಳು ಅಪಘಾತಕ್ಕೀಡಾಗಿವೆ. ಕುರುಂಬಾದಲ್ಲಿ 8 ಮಂದಿ, ಸಕಿಯಾದಲ್ಲಿ 4 ಮಂದಿಯಿದ್ದರು. ಇಂದು ಳಗ್ಗೆ 6:30ಕ್ಕೆ ದೋಣಿಗಳನ್ನು ಸಮುದ್ರಕ್ಕೆ ಇಳಿಸುತ್ತಿದ್ದಂತೆ ಬಲವಾದ ಗಾಳಿಗೆ ಸಿಲುಕಿ ಈ ಎರಡು ದೋಣಿಗಳು ಪರಸ್ಪರ ಢಿಕ್ಕಿಯಾಗಿ ಮಗುಚಿ ಬಿದ್ದಿದೆ.
ಕೀಯೂರಿನಲ್ಲಿ ಹೊಸತಾಗಿ ನಿರ್ಮಿಸಿದ ಅಳಿವೆಬಾಗಿಲು ಅಗಲ ಕಿರಿದಾಗಿರುವುದು ಹಾಗೂ ಆಳವಿಲ್ಲದಿರುವುದೇ ಅವಘಡಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಸ್ಥಳೀಯರು ಸೇರಿ ರಕ್ಷಿಸಿದ್ದಾರೆ. ಇದೇ ವೇಳೆ ವಿಷಯ ತಿಳಿಸಿದರೂ ಕರಾವಳಿ ಪೊಲೀಸರು ಘಟನಾ ಸ್ಥಳಕ್ಕೆ ಬಹಳಷ್ಟು ವಿಳಂಬವಾಗಿ ಆಗಮಿಸಿದ್ದರು ಎಂಬ ಆರೋಪ ಕೇಳಿಬಂದಿದೆ.





